ಡಾಕ್ಟರ್ ಮಗ ವೈದ್ಯ ವಿದ್ಯಾರ್ಥಿಯೇ ಸೋರಿಕೆಯ ರೂವಾರಿ
ನವದೆಹಲಿ : ವಿದ್ಯಾರ್ಥಿಯೊಬ್ಬ ಹಾಸ್ಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಕಳುಹಿಸಿದ್ದ ವಾಟ್ಸಾಪ್ ಮೆಸೇಜಿನಿಂದಾಗಿ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ವಿಚಾರೆ ಬಯಲಾಗಿದೆ ಎಂದು ತಿಳಿದುಬಂದಿದೆ.
22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳ ಕನಸು ಪರೀಕ್ಷೆ ರದ್ದಾದ ಕಾರಣ ಛಿದ್ರವಾಗಿದೆ. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯು ಈಗ ದೊಡ್ಡ ಹಗರಣವಾಗಿ ಬೆಳೆದಿದೆ. ತೀವ್ರ ಪ್ರತಿಭಟನೆಗಳ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಿದೆ.
ದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಮಾಣ ದಿಗ್ಭ್ರಮೆಗೊಳಿಸುವಂತಿದೆ. ವಶಪಡಿಸಿಕೊಂಡ ಮೊಬೈಲ್ ಫೋನ್ಗಳಲ್ಲಿ ಕಂಡುಬರುವ ಖಾಸಗಿ ಮಾಫಿಯಾ ವಾಟ್ಸಾಪ್ ಗುಂಪಿನಿಂದಲೇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಸಾಧ್ಯತೆಯ ಬಗ್ಗೆ ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳನ್ನು ಅಪ್ಲೋಡ್ ಮಾಡಲೆಂದೇ ರಚಿಸಲಾದ ಈ ಗುಂಪಿನಲ್ಲಿ ಸುಮಾರು 400 ಸದಸ್ಯರು ಇದ್ದರು ಎಂದು ವರದಿಯಾಗಿದೆ. ಇದು ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯವನ್ನು ಅತಿಹೆಚ್ಚು ಬಿಡ್ ಮಾಡಿದವರಿಗೆ ಹರಾಜು ಹಾಕುವ ಡಿಜಿಟಲ್ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸಿದೆ. ಈ ಖಾಸಗಿ ಮಾಫಿಯಾ ಎಂಬ ವಾಟ್ಸಾಪ್ ಗುಂಪಿನ ಹೆಸರು ಮತ್ತು ಆರೋಪಿ ಮನೀಶ್ ಯಾದವ್ ಅವರ ಹೆಸರು ಬಹಿರಂಗಗೊಂಡಿದೆ.
ವಾಟ್ಸಾಪ್ ಗುಂಪಿನಿಂದ ಪ್ರಶ್ನೆ ಪತ್ರಿಕೆಯ ಸೋರಿಕೆ ಆಕಸ್ಮಿಕವಾಗಿ ಸಂಭವಿಸಿಲ್ಲ. ಇದು ಪ್ಲಾನ್ ಮಾಡಿಯೇ ನಡೆಸಲಾದ ಕೃತ್ಯವಾಗಿತ್ತು. ಮೂಲಗಳ ಪ್ರಕಾರ ಈ ಪತ್ರಿಕೆಯು ನಾಸಿಕ್ನ ಮುದ್ರಣಾಲಯದಿಂದ ನೇರವಾಗಿ ಸೋರಿಕೆಯಾಗಿದೆ. ಪ್ರಶ್ನೆ ಪತ್ರಿಕೆಯ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬರಿಂದಲೇ ಈ ಪತ್ರಿಕೆ ಸೋರಿಕೆಯಾಗಿದೆ ಎನ್ನಲಾಗುತ್ತಿದೆ.
ಆರಂಭದಲ್ಲಿ ಈ ಪ್ರಶ್ನೆಪತ್ರಿಕೆಯನ್ನು ಊಹೆ ಪತ್ರಿಕೆಯ ಸೋಗಿನಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ ಸೋರಿಕೆಯಾದ ಸೆಟ್ನಲ್ಲಿರುವ 281 ಪ್ರಶ್ನೆಗಳಲ್ಲಿ, 90 ಜೀವಶಾಸ್ತ್ರದ ಪ್ರಶ್ನೆಗಳಲ್ಲಿ ಪ್ರತಿಯೊಂದೂ ನಿಜವಾದ ನೀಟ್ ಪರೀಕ್ಷೆಯಲ್ಲಿ ಬಂದಿತ್ತು. ಅಷ್ಟೇ ಅಲ್ಲ ಆ ಪ್ರಶ್ನೆಗಳಲ್ಲಿದ್ದ ಅನುಕ್ರಮ, ಅಲ್ಪವಿರಾಮಗಳು ಮತ್ತು ಪೂರ್ಣ ವಿರಾಮಗಳು ಸಹ ಒಂದೇ ರೀತಿಯಲ್ಲಿದ್ದವು.
ಸೋರಿಕೆಯಾದ ಈ ಪ್ರಶ್ನೆ ಪತ್ರಿಕೆಗಳ ಬೆಲೆ 30,000 ರೂ.ಗಳಿಂದ 28 ಲಕ್ಷ ರೂ.ಗಳವರೆಗೆ ಇತ್ತು. ದೆಹಲಿಯಿಂದ ಸುಳಿವು ಪಡೆದ ನಂತರ ನಾಗೌರ್ನ ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಕೇವಲ 4 ದಿನಗಳ ಮೊದಲು 28 ಲಕ್ಷ ರೂ.ಗಳನ್ನು ಪಾವತಿಸಿದ್ದಾನೆ ಎಂದು ವರದಿಯಾಗಿದೆ. ಬಳಿಕ ಆ ಹುಡುಗ ಆ ಪತ್ರಿಕೆಯನ್ನು ಕೇರಳದ ಎಂಬಿಬಿಎಸ್ ವಿದ್ಯಾರ್ಥಿಗೆ ಮಾರಿದ್ದ. ನಂತರ ಅವನು ಅದನ್ನು ಸಿಕಾರ್ನಲ್ಲಿರುವ ಪಿಜಿ ಹಾಸ್ಟೆಲ್ ನಿರ್ವಾಹಕನಾದ ತನ್ನ ತಂದೆಗೆ ಕಳುಹಿಸಿದ್ದನು.
ಆ ವಿದ್ಯಾರ್ಥಿಯ ವಾಟ್ಸಾಪ್ ಮೆಸೇಜ್ನಲ್ಲಿ ಅಪ್ಪಾ, ಇದನ್ನು ನನ್ನ ಒಬ್ಬ ಸ್ನೇಹಿತ ಕಳುಹಿಸಿದ್ದಾನೆ. ಹಾಸ್ಟೆಲ್ನಲ್ಲಿರುವ ಹುಡುಗಿಯರಿಗೆ ಕೊಡಿ. ನಾಳೆಯ ಪರೀಕ್ಷೆಯಲ್ಲಿ ಇದೇ ಪ್ರಶ್ನೆ ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಹಾಸ್ಟೆಲ್ ನಿರ್ವಾಹಕರು ಇದನ್ನು ಎಲ್ಲೆಡೆ ಶೇರ್ ಮಾಡಿದ್ದರು. ಆದರೆ ಪರೀಕ್ಷೆ ನಡೆದ ಬಳಿಕ ಅಲ್ಲಿ ನೀಡಿದ ಪ್ರಶ್ನೆ ಪತ್ರಿಕೆ ಹಾಗೂ ತಾವು ಶೇರ್ ಮಾಡಿದ್ದ ಪ್ರಶ್ನೆ ಪತ್ರಿಕೆ ಸಂಪೂರ್ಣವಾಗಿ ಒಂದೇ ರೀತಿಯಿತ್ತು ಎಂಬುದು ಗೊತ್ತಾದಾಗ ಅವರು ಆತಂಕಕ್ಕೊಳಗಾದರು. ತಾವು ಸಿಕ್ಕಿಬೀಳಬಹುದು ಎಂಬ ಭೀತಿಯಲ್ಲಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಇದನ್ನು ವದಂತಿ ಎಂದು ತಳ್ಳಿಹಾಕಿದರೂ, ಎನ್ಟಿಎ ಮತ್ತು ಗುಪ್ತಚರ ಬ್ಯೂರೋ ಮಧ್ಯಪ್ರವೇಶಿಸಿ ತನಿಖೆ ನಡೆಸಿದಾಗ ಪ್ರಶ್ನೆ ಪತ್ರಿಕೆ ಸೋರಿಕೆಯ ಜಾಲ ಪತ್ತೆಯಾಯಿತು. ಬಳಿಕ ಇದನ್ನು ಸಿಬಿಐಗೆ ವಹಿಸಲಾಯಿತು.
ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಬ್ಯಾಚುಲರ್ ಆಫ್ ಆಯುರ್ವೇದ ಮೆಡಿಸಿನ್ ಅಂಡ್ ಸರ್ಜರಿ (ಬಿಎಎಂಸ್) ವಿದ್ಯಾರ್ಥಿಯನ್ನು ಬಂಧಿಸಿದೆ. ಬಂಧಿತ ವಿದ್ಯಾರ್ಥಿಯನ್ನು ಶುಭಂ ಖೈರ್ನರ್ (30) ಎಂದು ಗುರುತಿಸಲಾಗಿದೆ. ಈತ ʻಊಹೆ ಪ್ರಶ್ನೆಪತ್ರಿಕೆʼ ಯನ್ನು (Guess Paper) ಪುಣೆ ಮೂಲದ ಶಂಕಿತನಿಂದ 10 ಲಕ್ಷ ರೂ.ಗೆ ಖರೀದಿಸಿ, ಹರಿಯಾಣದ ಮೂಲದ ವ್ಯಕ್ತಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ವಹಿಸಿಕೊಂಡಿರುವ ಸಿಬಿಐ 4 ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ನಾಸಿಕ್ ಅಪರಾಧ ವಿಭಾಗ ಬಂಧಿಸಿದ್ದ ವಿದ್ಯಾರ್ಥಿಯನ್ನು ಸಿಬಿಐ ತನ್ನ ಸುಪರ್ದಿಗೆ ಪಡೆಯಿತು.
ಶುಭಂ ತಂದೆ ಮತ್ತು ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಮಧುಕರ್ ಖೈರ್ನಾರ್ ಅವರು ತಮ್ಮ ಮಗನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ, ನನ್ನ ಮಗ ನಿರಪರಾಧಿ ಎಂದು ಹೇಳಿದ್ದಾರೆ.
ಏನಿದು NEET ಪ್ರಶ್ನೆಪತ್ರಿಕೆ ಸೋರಿಕೆ
ಮೇ 3ರಂದು ನಡೆಸಲಾದ ನೀಟ್ ಪರೀಕ್ಷೆಗೂ ಮುನ್ನವೇ ಈ ವರ್ಷದ ಗೆಸ್ ಪೇಪರ್ (ಸಂಭಾವ್ಯ ಪ್ರಶ್ನೆಗಳ ಪಟ್ಟಿ) ರಾಜಸ್ಥಾನದಲ್ಲಿ ಸೋರಿಕೆಯಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಇದಾದ ಬಳಿಕ, ಈ ಕುರಿತು ರಾಜಸ್ಥಾನದ ಸ್ಪೇಷಲ್ ಆಪರೇಷನ್ ತಂಡ ತನಿಖೆ ನಡೆಸಿದ್ದು, ನೀಟ್ ಪರೀಕ್ಷೆಗೂ 2-3 ದಿನಗಳ ಮೊದಲು ಸೋರಿಕೆಯಾದ ಸಂಭಾವ್ಯ ಪ್ರಶ್ನೆಪತ್ರಿಕೆಯ ಭಾಗವಾಗಿದ್ದ ಕೈಬರಹದ ಪ್ರಶ್ನೆಗಳ ಸೆಟ್ 720 ಅಂಕಗಳಲ್ಲಿ 600 ಅಂಕಗಳ ಮೌಲ್ಯದ ಸುಮಾರು 140 ಪ್ರಶ್ನೆಗಳು ನಿಜವಾದ ಪರೀಕ್ಷೆಯಲ್ಲಿ ಕಾಣಿಸಿಕೊಂಡಿವೆ. ಇದು ಅಸಲಿ ಪ್ರಶ್ನೆಪ್ರತಿಕೆಯೊಂದಿಗೆ ಬಹುತೇಕ ಹೋಲಿಕೆಯಾಗಿರುವುದು ಕಂಡುಬಂದಿದೆ. ಈಗಾಗಲೇ ಈ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನವೊಂದರಲ್ಲೇ ಸುಮಾರು 45 ಜನರನ್ನು ಬಂಧಿಸಲಾಗಿದೆ.
























