ಬೆಟ್ಟದ ವ್ಯೂ ಪಾಯಿಂಟ್‌ನಲ್ಲಿ ಸಂಭವಿಸಿದ ಭೀಕರ ದುರಂತ
ಮಲಪ್ಪುರಂ : ಬೆಟ್ಟದ ವ್ಯೂ ಪಾಯಿಂಟ್‌ಗೆ ಚಾರಣ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳು ಸಿಡಿಲು ಬಡಿದು ಮೃತಪಟ್ಟ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಮಂಕಡದಲ್ಲಿ ಮಂಗಳವಾರ ಸಂಜೆ ನಡೆದಿದೆ. ಅವರ ಜೊತೆಗಿದ್ದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ರಹೀಸ್(20), ಫಹಾದ್(19), ಬಹಾಸ್(18) ಮತ್ತು ಜಿಯಾದ್(18) ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಗಳೆಲ್ಲರೂ ಮಲಪುರಂದವರಾಗಿದ್ದಾರೆ. 7 ವಿದ್ಯಾರ್ಥಿಗಳ ಗುಂಪು ಮಂಕಡದ ಕುರುಂಗನ್‌ಚೋಳ ವ್ಯೂ ಪಾಯಿಂಟ್‌ಗೆ ತಲುಪಿದ ವೇಳೆ ಈ ಅವಘಡ ಸಂಭವಿಸಿದೆ. ಈ ಪೈಕಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಗಾಯಾಳುಗಳು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿದ್ಯಾರ್ಥಿಗಳು ಬೆಟ್ಟದ ಮೇಲೆ ಪ್ರಕೃತಿ ಸೌಂದರ್ಯ ಸವಿಯುತ್ತಿರುವಾಗ ದಿಢೀರ್ ಗುಡುಗು ಮಿಂಚಿನೊಂದಿಗೆ ಭಾರಿ ಮಳೆ ಶುರುವಾಗಿದೆ. ಅವರು ರಕ್ಷಣೆಗಾಗಿ ಮರದಡಿಗೆ ಹೋದಾಗ ಸಿಡಿಲು ಬಡಿದಿದೆ. ಎಲ್ಲ ಏಳು ಮಂದಿ ನೆಲದಲ್ಲಿ ಬಿದ್ದಿದ್ದು, ಅಲ್ಲೇ ಇದ್ದ ಕೆಲವು ಪ್ರವಾಸಿಗರು ಬಹಳ ಹೊತ್ತಾದರೂ ಏಳದಿದ್ದಾಗ ಸಂಶಯಗೊಂಡು ಹತ್ತಿರ ಬಂದು ನೋಡಿದಾಗ ದುರಂತ ಸಂಭವಿಸಿರುವುದು ತಿಳಿದುಬಂದಿದೆ. ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕಾಡಿನ ಮಧ್ಯೆ ದುರ್ಗಮ ಪ್ರದೇಶವಾದ ಕಾರಣ ರಕ್ಷಣಾ ಕಾರ್ಯಾಚರಣೆಯಲ್ಲಿ ವಿಳಂಬವಾಗಿದೆ. ಅನಿರೀಕ್ಷಿತವಾಗಿ ಸುರಿದ ಭಾರೀ ಮಳೆ ನಡುವೆ ಗುಡುಗು ಸಿಡಿಲಿನ ಆರ್ಭಟವೂ ಜೋರಾಗಿದೆ. ಕುರಂಗನ್‌ಚೋಳ ವ್ಯೂ ಪಾಯಿಂಟ್ ಇತ್ತೀಚೆಗಿನ ವರ್ಷಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸ್ಥಳೀಯರು ಅಲ್ಲಿಗೆ ಹೋಗುವುದು ಮಾಮೂಲು ಸಂಗತಿ ಎಂದು ಅಲ್ಲಿನವರು ಹೇಳಿದ್ದಾರೆ.
























