ಸಂಧಾನ ಮಾತುಕತೆ ವೇಳೆಯೇ ಅಮೆರಿಕ ಜೊತೆ ಡಬ್ಬಲ್‌ ಗೇಮ್‌ ಆಡಿದ ಪಾಕಿಸ್ತಾನ

ಇರಾನ್‌ ಯುದ್ಧ ವಿಮಾನಗಳಿಗೆ ರಹಸ್ಯವಾಗಿ ವಾಯುನೆಲೆಯಲ್ಲಿ ಆಶ್ರಯ ನೀಡಿದ ವಿಚಾರ ಬಹಿರಂಗ

ವಾಷಿಂಗ್ಟನ್‌: ಅಮೆರಿಕ ಮತ್ತು ಇರಾನ್‌ ನಡುವೆ ಸಮರ ಸಂಧಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನ ಇನ್ನೊಂದೆಡೆ ಇರಾನ್‌ಗೆ ಗುಪ್ತವಾಗಿ ಬೆಂಬಲ ನೀಡಿದ ವಿಚಾರ ಈಗ ಬೆಳಕಿಗೆ ಬಂದಿದೆ. ಇರಾನ್‌ನ ಮಿಲಿಟರಿ ವಿಮಾನಗಳನ್ನು ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಲ್ಲಿ ನಿಲ್ಲಿಸಲು ಪಾಕಿಸ್ತಾನ ರಹಸ್ಯವಾಗಿ ಅವಕಾಶ ಮಾಡಿಕೊಟ್ಟು ಡಬ್ಬಲ್‌ ಗೇಮ್‌ ಆಡಿದೆ ಎಂದು ವರದಿಯೊಂದು ಬಹಿರಂಗಗೊಳಿಸಿದೆ.

ಏಪ್ರಿಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ಕದನ ವಿರಾಮ ಘೋಷಿಸಿದ ಕೆಲವೇ ದಿನಗಳಲ್ಲಿ, ಇರಾನ್ ತನ್ನ ಹಲವು ಮಿಲಿಟರಿ ವಿಮಾನಗಳನ್ನು ಪಾಕಿಸ್ತಾನದ ಈ ವಾಯುನೆಲೆಗೆ ಸ್ಥಳಾಂತರಿಸಿದೆ. ಅಮೆರಿಕದ ಸಂಭಾವ್ಯ ವೈಮಾನಿಕ ದಾಳಿಗಳಿಂದ ತನ್ನ ಮಿಲಿಟರಿ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ಇರಾನ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ವಿಮಾನಗಳಲ್ಲಿ ಇರಾನ್ ವಾಯುಪಡೆಯ RC-130 ವಿಚಕ್ಷಣಾ ವಿಮಾನವೂ ಸೇರಿದೆ ಎಂದು ವರದಿ ಬಹಿರಂಗಪಡಿಸಿದೆ.





















































 
 

ಪಾಕಿಸ್ತಾನ ಸರ್ಕಾರ ಈ ವರದಿಗಳನ್ನು ದಾರಿ ತಪ್ಪಿಸುವಂತದ್ದು ಎಂದು ಹೇಳಿದೆ. ಈ ವಿಮಾನಗಳು ಶಾಂತಿ ಮಾತುಕತೆಗೆ ಬಂದ ರಾಜತಾಂತ್ರಿಕ ನಿಯೋಗಕ್ಕೆ ಸಂಬಂಧಿಸಿದ್ದವೇ ಹೊರತು ಮಿಲಿಟರಿ ಉದ್ದೇಶಕ್ಕಾಗಿ ಅಲ್ಲ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ನೂರ್ ಖಾನ್ ವಾಯುನೆಲೆಯು ನಗರದ ಹೃದಯಭಾಗದಲ್ಲಿದ್ದು, ಅಲ್ಲಿ ಇಷ್ಟು ದೊಡ್ಡ ಮಟ್ಟದ ವಿಮಾನಗಳನ್ನು ಅಡಗಿಸಿಡಲು ಸಾಧ್ಯವಿಲ್ಲ ಎಂದು ಪಾಕ್ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಪಾಕಿಸ್ತಾನದ ಈ ನಡೆಯನ್ನು ಖಂಡಿಸಿದ್ದು, ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಪುನರ್ ವಿಮರ್ಶಿಸುವಂತೆ ಕರೆ ನೀಡಿದ್ದಾರೆ.

ಇದೇ ನೂರ್ ಖಾನ್ ವಾಯುನೆಲೆಯ ಮೇಲೆ ಕಳೆದ ವರ್ಷ ಭಾರತ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಸಮಯದಲ್ಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ವಾಯುನೆಲೆಗೆ ಸಾಕಷ್ಟು ಹಾನಿಯಾದ ಬಗ್ಗೆ ಪಾಕಿಸ್ತಾನ ಇತ್ತೀಚೆಗೆ ಅಧಿಕೃತವಾಗಿ ಒಪ್ಪಿಕೊಂಡಿತ್ತು.

error: Content is protected !!
Scroll to Top