ಮೋದಿ ಪ್ರಯಾಣಿಸಿದ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣ : ತನಿಖೆಗೆ ತಂಡ ರಚನೆ

ಬಾಂಬ್‌ ತಯಾರಿಸಲು ಬಳಸುವ ಜಿಲೆಟಿನ್‌ ಕಡ್ಡಿಗಳು ರಸ್ತೆಯಲ್ಲಿ ಪತ್ತೆ

ಬೆಂಗಳೂರು: ಬೆಂಗಳೂರಿನ ಹೊರವಲಯದ ಆರ್ಟ್ ಆಫ್ ಲಿವಿಂಗ್‌ನ ಕಾರ್ಯಕ್ರಮದಲ್ಲಿ ಭಾನುವಾರ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪ ಉಂಟಾಗಿದ್ದು, ಮೋದಿ ತೆರಳುವ ರಸ್ತೆ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಗ್ಗಲೀಪುರ ಪೊಲೀಸರು, ತನಿಖೆಗೆ 4 ತಂಡ ರಚನೆ ಮಾಡಿ ವಿವಿಧ ಆಯಾಮಗಳಲ್ಲಿ ವಿಚಾರಣೆ ಆರಂಭಿಸಿದ್ದಾರೆ.

ಬೆಂಗಳೂರು ಹೊರವಲಯದ ಕಗ್ಗಲೀಪುರ ಸಮೀಪ ಇರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಧ್ಯಾನ ಮಂದಿರ ಉದ್ಘಾಟನೆ ಹಾಗೂ ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಿದ ಬಳಿಕ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಮೋದಿ ತೆರಳುವ ರಸ್ತೆ ಮಾರ್ಗದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿರೋದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.





















































 
 

ಕಗ್ಗಲೀಪುರ ಸಮೀಪದ ತಾತಗುಣಿ ಬಳಿಯ ರಸ್ತೆ ಪಕ್ಕದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಪೊಲೀಸರ ಪರಿಶೀಲನೆ ವೇಳೆ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ತಕ್ಷಣ ಪೊಲೀಸರು ಜಿಲೆಟಿನ್ ಕಡ್ಡಿಗಳನ್ನ ವಶಕ್ಕೆ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಕ್ರಮದಿಂದ ಪ್ರಧಾನಿ ಮೋದಿ ತೆರಳಿದ ಬಳಿಕ ಸ್ಥಳಕ್ಕೆ ಸುಕೋ ಟೀಂ ಹಾಗೂ ಎಫ್‌ಎಸ್‌ಎಲ್ ಟೀಂ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರಕರಣದ ತನಿಖೆಗೆ ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಾಲ್ಕು ತಂಡಗಳ ರಚನೆ ಮಾಡಲಾಗಿದ್ದು, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ಮಾಡಲಾಗುತ್ತಿದ್ದು, ಸ್ಥಳಕ್ಕೆ ಜಿಲೆಟಿನ್ ಕಡ್ಡಿ ಹೇಗೆ ಬಂತು, ಯಾರು ಅದನ್ನ ತಂದು ರಸ್ತೆ ಪಕ್ಕ ಹಾಕಿದ್ದಾರೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೇ ಜಿಲೆಟಿನ್ ಕಡ್ಡಿ ಬಳಸುವ ಕಲ್ಲುಕ್ವಾರಿ ಮಾಲೀಕರು ಹಾಗೂ ಕಾರ್ಮಿಕರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಜೊತೆಗೆ ಅಕ್ಕಪಕ್ಕದ ಗೋಡೌನ್‌ಗಳನ್ನೂ ತಪಾಸಣೆ ನಡೆಸಿದ್ದಾರೆ.

ಬೆಂಗಳೂರಿನ ಕೋರಮಂಗಲ ಮೂಲದ ವ್ಯಕ್ತಿಯೋರ್ವ ಪೊಲೀಸರಿಗೆ ಬೆದರಿಕೆ ಹಾಕಿದ್ದ ಪ್ರಕರಣ ಹಾಗೂ ಜಿಲೆಟಿನ್ ಕಡ್ಡಿ ಪತ್ತೆಯಾದ ಪ್ರಕರಣಕ್ಕೂ ಏನಾದರೂ ಸಂಬಂಧ ಇದೆಯಾ ಅಥವಾ ಕೇವಲ ಜಿಲೆಟಿನ್ ಕಡ್ಡಿ ಇಟ್ಟು ಬೆದರಿಸುವ ಕೆಲಸ ಆಗಿದ್ಯಾ ಎಂಬುದು ತನಿಖೆ ಮೂಲಕ ಬೆಳಕಿಗೆ ಬರಬೇಕಿದೆ.

error: Content is protected !!
Scroll to Top