ವಿಟ್ಲ: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಕುಳ ಗ್ರಾಮದ ಕಂಪ ಶ್ರೀಧರ ಗೌಡ ಎಂಬವರ ಪತ್ನಿ ರಾಧಾ ಅಲಿಯಾಸ್ ಲತಾ (40) ಎಂದು ಗುರುತಿಸಲಾಗಿದೆ.
ಈ ಸಂಬಂಧ ಮೃತರ ಸಹೋದರ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಲತಾ ಮತ್ತು ಶ್ರೀಧರ ಗೌಡ ಅವರಿಗೆ 13 ವರ್ಷಗಳ ಹಿಂದೆ ವಿವಾಹವಾಗಿ, ಇಬ್ಬರು ಮಕ್ಕಳಿದ್ದಾರೆ. ಕಳೆದ ಸುಮಾರು 10 ವರ್ಷಗಳಿಂದ ಲತಾಗೆ ಮಾನಸಿಕ ಸಮಸ್ಯೆ ಇದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಹಿಂದೆಯೂ ಎರಡು ಬಾರಿ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಶರಣಾಗುವ ದಿನದಂದು ಮಧ್ಯಾಹ್ನ ಲತಾ ಅವರು ಮಾವ ಕುಕ್ಕಪ್ಪ ಗೌಡರಿಗೆ ಊಟ ಕೊಟ್ಟಿದ್ದಾರೆ. ಸಂಜೆ ಚಹಾ ತಯಾರಿಸಿ ಕೊಡಲು ಮಾವ ಅಕ್ಕನನ್ನು ಕರೆದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದುದರಿಂದ ಮಾವ ಕುಕ್ಕಪ್ಪ ಗೌಡರು ಪಕ್ಕದಲ್ಲಿರುವ ಧರ್ಣಪ್ಪ ಗೌಡರವರ ಮನೆಯ ಬಳಿ ಹೋಗಿ ಕೇಳಿದ್ದಾರೆ. ಅಲ್ಲಿಯೂ ಇಲ್ಲದೇ ಇದ್ದುದರಿಂದ ಕುಕ್ಕಪ್ಪ ಗೌಡ, ಧರ್ಣಪ್ಪ ಗೌಡ ಹಾಗೂ ಮನೆ ಹತ್ತಿರದ ಕುಟುಂಬಿಕರು ಅಕ್ಕ ರಾಧಳನ್ನು ಹುಡುಕಿದ್ದು, ಕುಕ್ಕಪ್ಪ ಗೌಡರ ಮನೆಯ ಪಕ್ಕದಲ್ಲಿರುವ ದಾಸ್ತಾನು ಕೊಠಡಿಯ ಪಕ್ಕಾಸಿನ ಅಡ್ಡಕ್ಕೆ ಅಕ್ಕ ಲತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
























