ಸೋತು ಸುಣ್ಣವಾಗಿದ್ದರೂ ಅಧಿಕಾರ ಬಿಡಲೊಪ್ಪದ ದೀದಿ
ಕೋಲ್ಕತ್ತ: ಪಶ್ಚಿಮ ಬಂಗಾಳದ ಪರಾಜಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಪಕ್ಷ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರೂ ಅಧಿಕಾರ ಬಿಟ್ಟುಕೊಡಲಾರೆ ಎಂದು ಪಟ್ಟುಹಿಡಿದು ಕುಳಿತಿದ್ದಾರೆ. ಅವರ ಪಕ್ಷಕ್ಕಿರುವ ಐದು ವರ್ಷದ ಜನಾದೇಶವೂ ಇಂದಿಗೆ ಮುಕ್ತಾಯವಾಗುತ್ತದೆ. ಆದರೂ ಬಂಗಾಳದ ದೀದಿ ರಾಜೀನಾಮೆ ಕೊಡಲಾರೆ ಎನ್ನುತ್ತಿದ್ದಾರೆ.
ತನ್ನ ಪಕ್ಷದ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯನ್ನುದ್ದೇಶಿಸಿ ನಿನ್ನೆ ಮಾತನಾಡಿದ ಅವರು ಮತ್ತೆ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ವಿಧಾನಸಭೆ ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಬೇಕಾದರೆ ಕೇಂದ್ರ ಸರ್ಕಾರವೇ ವಜಾ ಮಾಡಲಿ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬಲವಂತವಾಗಿ ಸೋಲಿಸಲಾಗಿದೆ ಎಂದು ಅವರು ಹೇಳಿದ್ದು, 1500ಕ್ಕೂ ಹೆಚ್ಚು ತೃಣಮೂಲ ಕಾಂಗ್ರೆಸ್ ಕಚೇರಿಗಳನ್ನು ಕಬಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಂಗಾಳ ಚುನಾವಣಾ ಫಲಿತಾಂಶಗಳ ನಂತರ ಇಂಡಿಯಾ ಮೈತ್ರಿಕೂಟದಲ್ಲಿ ಇನ್ನಷ್ಟು ಏಕತೆ ಮೂಡಿದೆ ಎಂದೂ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಚುನಾವಣೆ ನಡೆದಿಲ್ಲ, ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ ಅವರು, ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ನೈತಿಕ ಜಯ ಸಾಧಿಸಿದೆ, ನಾನು ಹೋರಾಟ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
ಬಂಗಾಳದ ನಂತರ ಇಂಡಿಯಾ ತಂಡ ಈಗ ಏಕತೆಯಾಗಿದೆ. ನಾನು ರಾಜೀನಾಮೆ ನೀಡುವುದಿಲ್ಲ. ಬೇಕಾದರೆ ಅವರು ನನ್ನನ್ನು ವಜಾ ಮಾಡಲಿ. ಈ ದಿನವನ್ನು ಕಪ್ಪು ದಿನವಾಗಿ ಆಚರಿಸಬೇಕು. ನಾವು ಬಲವಾಗಿರಬೇಕು. ವಿಧಾನಸಭೆಯ ಮೊದಲ ದಿನ ಕಪ್ಪುಬಟ್ಟೆ ಧರಿಸಿ ಬನ್ನಿ. ದ್ರೋಹ ಮಾಡಿದವರನ್ನು ಪಕ್ಷದಿಂದ ತೆಗೆದುಹಾಕಲಾಗುವುದು. ನನಗೆ ಬೇಸರವೇನೂ ಇಲ್ಲ, ನಾನು ಅವರನ್ನು ನೈತಿಕವಾಗಿ ಸೋಲಿಸಿದ್ದೇನೆ. ನಾನು ಇಂದು ಸ್ವತಂತ್ರ ಹಕ್ಕಿ. ಎಲ್ಲರಿಗಾಗಿ ಕೆಲಸ ಮಾಡಿದ್ದೇನೆ. ನಾವು ಸೋತಿರಬಹುದು, ಆದರೆ ಹೋರಾಟ ಮುಂದುವರಿಸುತ್ತೇವೆ. ಗೃಹ ಸಚಿವರು ಮತ್ತು ಪ್ರಧಾನಮಂತ್ರಿಗಳು ನೇರವಾಗಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಲವಂತವಾಗಿ ಸೋಲಿಸಲಾಗಿದೆ. ಪಶ್ಚಿಮ ಬಂಗಾಳ ಪೊಲೀಸ್, ಸಿಆರ್ಪಿಎಫ್, ಬಿಜೆಪಿ ಮನೋಭಾವದ ಮುಖ್ಯ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯೋಗವನ್ನು ನಾನು ಖಂಡಿಸುತ್ತೇನೆ. ಪಕ್ಷದ 1500ಕ್ಕೂ ಹೆಚ್ಚು ಕಚೇರಿಗಳನ್ನು ಕಬಳಿಸಲಾಗಿದೆ. ನನ್ನನ್ನು ಅಂದು ತಳ್ಳಿದ್ದರಿಂದ ಎದೆನೋವು ಕಾಣಿಸಿಕೊಂಡಿತು. ಇದು ಚುನಾವಣೆ ಅಲ್ಲ, ದೌರ್ಜನ್ಯ ಎಂದು ಅವರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿರುವುದು ರಾಜ್ಯದಲ್ಲಿ ಸಂವಿಧಾನಾತ್ಮಕ ಸಂಕಷ್ಟವನ್ನು ಸೃಷ್ಟಿಸಿದೆ. 207 ಸ್ಥಾನಗಳನ್ನು ಗೆದ್ದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಭಾರತೀಯ ಜನತಾ ಪಾರ್ಟಿ ಸರ್ಕಾರ ರಚನೆಗೆ ಸಿದ್ಧತೆಗಳನ್ನು ಮುಂದುವರಿಸಿದೆ. ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ರಚಿಸುತ್ತಿರುವ ಸರ್ಕಾರವಾಗಲಿದೆ.
























