ತಮಿಳುನಾಡಲ್ಲಿ ಡಿಎಂಕೆ ಬೆನ್ನಿಗಿರಿದ ಕಾಂಗ್ರೆಸ್‌

ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ ಘೋಷಣೆ, ಇಂಡಿ ಮೈತ್ರಿಕೂಟದಲ್ಲಿ ಬಿರುಕು

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಅಚ್ಚರಿ ತಿರುವು ಕಂಡುಬಂದಿದ್ದು, ಡಿಎಂಕೆ ನೇತೃತ್ವದ ಮೈತ್ರಿಗೆ ಭಾರಿ ಶಾಕ್ ಉಂಟಾಗಿದೆ. ಕಾಂಗ್ರೆಸ್ ತನ್ನ ಹಳೆಯ ಮೈತ್ರಿಯನ್ನು ಬಿಟ್ಟು ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕಡೆ ಮುಖ ಮಾಡಿದ್ದು, ಹೊಸ ಮೈತ್ರಿ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗುತ್ತಿದೆ. ಪಕ್ಷದ ಹಿರಿಯ ನಾಯಕ ಕೆ. ಸಿ. ವೇಣಗೋಪಾಲ್‌ ನಿನ್ನೆ ಟಿವಿಕೆಗೆ ಬೆಂಬಲ ನೀಡುವುದಾಗಿ ಹೇಳಿದ ಬೆನ್ನಲ್ಲೇ ಡಿಎಂಕೆ ನಾಯಕರು ಕೆಂಡಾಮಂಡಲವಾಗಿದ್ದಾರೆ.

ಬೆನ್ನಿಗಿರಿಯುವುರಲ್ಲಿ ಕಾಂಗ್ರೆಸ್‌ಗೆ ಸಾಟಿ ಯಾರೂ ಇಲ್ಲ ಎಂದು ಡಿಎಂಕೆ ನಾಯಕರು ಕಿಡಿಕಾರಿದ್ದಾರೆ. ಕಾಂಗ್ರೆಸ್‌ ಗೆದ್ದ ಎತ್ತಿನ ಬಾಲ ಹಿಡಿದು ನೇತಾಡುವ ಹೀನಾಯ ಸ್ಥಿತಿಗೆ ತಲುಪಿದೆ. ಬಿಜೆಪಿ ರಾಹುಲ್‌ ಗಾಂಧಿಯನ್ನು ಪಪ್ಪು ಎಂದು ಲೇವಡಿ ಮಾಡುತ್ತಿರುವಾಗ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದು ಡಿಎಂಕೆ ವರಿಷ್ಠ ಸ್ಟಾಲಿನ್‌ ಮಾತ್ರ. ಈ ವಿಚಾರವನ್ನು ಕಾಂಗ್ರೆಸ್‌ ಇಷ್ಟು ಬೇಗ ಮರೆಯಬಾರದಿತ್ತು ಎಂದು ಡಿಎಂಕೆ ನಾಯಕ ಅಣ್ಣಾದೊರೈ ಹೇಳಿದ್ದಾರೆ.





















































 
 

ಚುನಾವಣಾ ಫಲಿತಾಂಶಗಳ ಬಳಿಕ ಸ್ಪಷ್ಟ ಬಹುಮತ ಯಾವುದೇ ಪಕ್ಷಕ್ಕೂ ಸಿಗದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದವು.
ಈ ನಡುವೆ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಗೆ ಮುಂದಾಗಿದ್ದು, ಮೈತ್ರಿ ಸರ್ಕಾರದ ಘೋಷಣೆಯೊಂದಿಗೆ ವಿವಿಧ ಪಕ್ಷಗಳ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದೆ. ಇದಕ್ಕೆ ಸ್ಪಂದಿಸಿರುವ ಕಾಂಗ್ರೆಸ್, ತನ್ನ ಬೆಂಬಲ ನೀಡಲು ಮುಂದಾಗಿರುವುದು ರಾಜಕೀಯ ಸಮೀಕರಣಗಳನ್ನು ಸಂಪೂರ್ಣವಾಗಿ ಬದಲಿಸಿದೆ.

ಕಾಂಗ್ರೆಸ್ ಮತ್ತು ಟಿವಿಕೆ ನಡುವೆ ನಡೆದ ಮಾತುಕತೆಗಳಲ್ಲಿ ಸಂಪುಟ ಸ್ಥಾನ ಹಂಚಿಕೆ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರದಲ್ಲಿ ಪ್ರಮುಖ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ನಿರ್ಧಾರಕ್ಕೂ ಮುನ್ನ ನಡೆದ ತುರ್ತು ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಕೇಂದ್ರ ನಾಯಕತ್ವದ ಸೂಚನೆಗಳ ಮೇರೆಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ.ತಡರಾತ್ರಿ 10.30ಕ್ಕೆ ನಡೆದ ತಮಿಳುನಾಡು ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿಯ ತುರ್ತು ಸಭೆಯಲ್ಲಿ ಟಿವಿಕೆಯನ್ನು ಬೆಂಬಲಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಎಐಸಿಸಿ ಉಸ್ತುವಾರಿ ಗಿರೀಶ್ ಚೋಡಂಕರ್ ಕರೆದಿದ್ದ ಸಭೆಯನ್ನು ವರ್ಚುವಲ್ ಮೂಲಕ ನಡೆಸಲಾಯಿತು.

ವಿಜಯ್ ಅವರ ಬೆಂಬಲ ಕೋರಿಕೆಯ ಬಗ್ಗೆ ನಿರ್ಧರಿಸಲು ರಾಜ್ಯ ಘಟಕಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ ತಡರಾತ್ರಿ ಸಭೆ ನಡೆಸಿ, ನಿರ್ಧಾರ ಕೈಗೊಳ್ಳಲಾಗಿದೆ. ಡಿಎಂಕೆ ನೇತೃತ್ವದ ಮೈತ್ರಿ ಅಧಿಕಾರ ಕಳೆದುಕೊಂಡ ಕೇವಲ ಒಂದು ದಿನದೊಳಗೆ ಕಾಂಗ್ರೆಸ್ ಈ ತೀರ್ಮಾನ ಕೈಗೊಂಡಿರುವುದು ಡಿಎಂಕೆಗೆ ಬಹುದೊಡ್ಡ ಶಾಕ್ ನೀಡಿದೆ.

error: Content is protected !!
Scroll to Top