ಅನೇಕ ಅನಾಹುತಗಳನ್ನು ಸೃಷ್ಟಿಸಿದ ಅಕಾಲಿಕ ಮಳೆ, ಜನ ಹೈರಾಣ
ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ರಣಮಳೆ ಅನೇಕ ಅನಾಹುತಗಳನ್ನು ಸೃಷ್ಟಿಸಿದೆ. ಜೊತೆಗೆ ಆಡಳಿತದ ವೈಫಲ್ಯಗಳನ್ನು ಕೂಡ ಬಯಲು ಮಾಡಿದೆ. ಮಳೆ ಉಂಟು ಮಾಡಿದ ಅವಾಂತರಗಳಿಗೆ ನಗರದಲ್ಲಿ ಒಟ್ಟು ಮಂದಿ ಬಲಿಯಾಗಿದ್ದಾರೆ. ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. ಇನ್ನಿಬ್ಬರು ಪ್ರತ್ಯೇಕ ದುರ್ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ.
ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತದಿಂದ 8 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ ಯಾರಬ್ ನಗರದಲ್ಲಿ ಮಳೆಯಲ್ಲಿ ಬೈಕ್ ಪಾರ್ಕ್ ಮಾಡುತ್ತಿದ್ದ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ವಿದ್ಯುತ್ ಶಾಕ್‍ಗೆ ಬಲಿಯಾಗಿದ್ದಾನೆ. ಒಟ್ಟು ಹತ್ತು ಸಾವು ಸಂಭವಿಸಿದೆ.
ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಂಜೆ 5 ಗಂಟೆಯಿಂದ ಸತತ 1 ಗಂಟೆ ಕಾಲ ಎಡಬಿಡದೆ ಮಳೆ ಸುರಿದಿದೆ. ಬಿರುಗಾಳಿ, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆ ಜೋರಾಗುತ್ತಿದ್ದಂತೆ ಬೀದಿಬದಿ ವ್ಯಾಪಾರಿಗಳು, ಕಾಂಪೌಂಡ್ ಪಕ್ಕದಲ್ಲಿ ಆಶ್ರಯ ಪಡೆದಿದ್ದಾರೆ. ಮಳೆಯಲ್ಲಿ ಮಕ್ಕಳು ಒದ್ದೆಯಾಗುತ್ತಾರೆ ಎಂದು ಎಲ್ಲರೂ ಕಾಂಪೌಂಡ್ ಬದಿಗೆ ಓಡಿ ಬಂದಿದ್ದಾರೆ. ಆದರೆ ಬೃಹತ್ ಕಾಂಪೌಂಡ್ನಲ್ಲೇ ಕಾದು ಕುಳಿತಿದ್ದ ಜವರಾಯ, 8 ಜನರ ಜೀವ ಹೊತ್ತೊಯ್ದಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನೆ ಮಾಡಿದರು. ದುರಂತದ ಬಗ್ಗೆ ಸ್ಥಳೀಯರು, ಜಿಬಿಎ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಒತ್ತಡದಿಂದ ಕಾಂಪೌಂಡ್ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಏಕಾಏಕಿ ಹೇಗೆ ಕುಸಿದು ಬಿತ್ತು ಎಂದು ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡರು. ದುರಂತದ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಪ್ರಧಾನಿ ಸಂತಾಪ
ಶಿವಾಜಿನಗರದಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿರುವ ದುರಂತ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಗೋಡೆ ಕುಸಿದು ಸಂಭವಿಸಿದ ದುರ್ಘಟನೆ ದುರದೃಷ್ಟಕರ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮೃತರ ಕುಟುಂಬಸ್ಥರಿಗೆ PMNRF ನಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಪ್ರಧಾನಿಗಳು ತಿಳಿಸಿದ್ದಾರೆ.
ಸರ್ಕಾರ ಜನರ ನೆರವಿಗೆ ನಿಲ್ಲಲಿ ಎಂದ ಸಿ.ಟಿ.ರವಿ
ಅವಘಡ ಬಗ್ಗೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, 8 ಜನ ಮೃತಪಟ್ಟಿರುವುದಾಗಿ ಪ್ರಾಥಮಿಕ ಮಾಹಿತಿ ಇದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಅಕಾಲಿಕ ಮಳೆಗೆ ಇಷ್ಟೊಂದು ಅವಾಂತರ ಆಗಿದೆ. ಇದಕ್ಕೆ ನಾವು ಸರ್ಕಾರವನ್ನು ದೂರುವುದಿಲ್ಲ. ಸರ್ಕಾರ ಜನರ ನೆರವಿಗೆ ನಿಲ್ಲಬೇಕು ಎಂದು ಹೇಳಿದ್ದಾರೆ.
ವಿಧಾನಸೌಧ, ಪೊಲೀಸ್ ಕಮಿಷನರ್ ಕಚೇರಿ, ಇನ್‌ಫೆಂಟ್ರಿ ರೋಡ್, ಲ್ಯಾವೆಲ್ಲೆ ರೋಡ್, ಶಿವಾಜಿನಗರ, ರಿಚ್‌ಮಂಡ್ ಟೌನ್, ಅವೆನ್ಯೂ ರೋಡ್ ಸುತ್ತಮುತ್ತ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಸುಮ್ಮನಹಳ್ಳಿ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾಗಿದೆ. ಕಾರು-ಲಾರಿ ಸೇರಿದಂತೆ 7-8 ವಾಹನಗಳ ಮಧ್ಯೆ ಅಪಘಾತವಾಗಿದ್ದು, ಹಲವಾರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಲ್ಫ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಮುಳುಗಡೆಯಾಗಿವೆ. ಮಲ್ಲೇಶ್ವರಂ, ಯಶವಂತಪುರದ ಬೃಹದಾಕಾರದ ಮರಗಳು ಧರೆಗುರುಳಿದ್ದು, ಕೆಲವೆಡೆ ಕಾರುಗಳೂ ಮುಳಗಡೆಯಾದ ದೃಶ್ಯಗಳು ಕಂಡುಬಂದವು. ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಕೊಠಡಿಗೆ ಮಳೆ ನೀರು ನುಗ್ಗಿದೆ. ಕಿಟಕಿಯಿಂದ ಮಳೆನೀರು ನುಗ್ಗಿ ನೆಲದ ಮೇಲೆ ಹರಿದಿದೆ. ಮಳೆ ನೀರಲ್ಲಿ ದಿನಪತ್ರಿಕೆಗಳು ತೇಲಿವೆ. ಶಾಂತಿನಗರದ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.
ಬಿನ್ನಿಮಿಲ್‌ನಲ್ಲಿ 30 ಅಡಿ ಉದ್ದದ ಗೋಡೆ ಕುಸಿತ
ಬಿನ್ನಿಮಿಲ್ ರಸ್ತೆಯಲ್ಲಿ 30 ಅಡಿ ಉದ್ದದ ಗೋಡೆ ಕುಸಿತಗೊಂಡಿದ್ದು ಕಿರಿದಾದ ರಸ್ತೆಗೆ ಬೃಹತ್ ಗೋಡೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಮಲ್ಲೇಶ್ವರದ ಮಾರ್ಗೋಸಾ ರಸ್ತೆಯಲ್ಲಿ ಹತ್ತಾರು ಕಡೆ ಮರಗಳು, ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಹೀಗಾಗಿ ಪ್ರಮುಖ ಸಂಚಾರ ರಸ್ತೆಯಾದ ಮಾರ್ಗೋಸಾ ರಸ್ತೆ ಬಂದ್ ಆಗಿತ್ತು. ಮಳೆ, ಗಾಳಿಗೆ ಸಿಟಿ ಯೂನಿಯನ್ ಬ್ಯಾಂಕ್‌ನ ಬೃಹತ್ ನಾಮಫಲಕ ಬಿದ್ದುಹೋಗಿದೆ.
170 ಧರಾಶಾಯಿ
ಒಂದೇ ಒಂದು ಧಾರಾಕಾರ ಮಳೆಗೆ ಬೆಂಗಳೂರಿನಲ್ಲಿ 170 ಕ್ಕೂ ಅಧಿಕ ಮರಗಳು ಧರೆಗುರುಳಿವೆ, 408 ಮರದ ಕೊಂಬೆಗಳು ಮುರಿದು ಬಿದ್ದಿವೆ. 5 ಪಾಲಿಕೆಗಳ ವ್ಯಾಪ್ತಿಯಲ್ಲಿ 68 ಕಡೆ ಜಲಾವೃತವಾಗಿದೆ. 25 ವರ್ಷಗಳ ಬಳಿಕ ಏಪ್ರಿಲ್‌ನಲ್ಲಿ ದಾಖಲೆ ಮಳೆಸುರಿದಿದೆ. ಇಂದು 111.0 ಮಿಮೀ ಆಗಿದ್ದು, ಏಪ್ರಿಲ್ ತಿಂಗಳ ಇಲ್ಲಿಯವರೆಗೆ ಹೊಸ ದಾಖಲೆ ಇದಾಗಿದೆ. ಈ ಹಿಂದೆ 2001ರ ಏಪ್ರಿಲ್ 19ರಂದು 108.6 ಮಿಮೀ ಮಳೆಯಾಗಿತ್ತು.

























