ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡು, ನೃತ್ಯಗಳಿಗೆ ಬ್ರೇಕ್‌

ಖಾಸಗಿ ಶಾಲೆಗಳೂ ಸೇರಿ ಎಲ್ಲ ಶಾಲೆಗಳಿಗೆ ನಿಯಮ ಅನ್ವಯ

ಬೆಂಗಳೂರು : ಶಾಲೆಗಳ ವಾರ್ಷಿಕೋತ್ಸವ ಸೇರಿದಂತೆ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ಶಿಕ್ಷಣ ಇಲಾಖೆ ನಿಷೇಧಿಸಿದೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ರಾಜ್ಯದ ಎಲ್ಲ ಶಾಲೆಗಳು (ಖಾಸಗಿ ಶಾಲೆಗಳೂ ಸೇರಿ) ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಅಸಭ್ಯ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸಿದರೆ ಸಂಬಂಧಿತ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಾಲೆ ನಿರ್ವಹಣೆ ಮಾಡುವವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ದೇಶಭಕ್ತಿ, ಪ್ರೇರಣಾದಾಯಕ ಹಾಗೂ ಸಕಾರಾತ್ಮಕ ಸಂದೇಶ ಹೊಂದಿರುವ ಹಾಡುಗಳನ್ನು ಮಕ್ಕಳ ನೃತ್ಯಕ್ಕೆ ಬಳಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ, ಮೌಲ್ಯಗಳನ್ನು ಉತ್ತೇಜಿಸುವ ಗೀತೆಗಳಿಗೆ ಆದ್ಯತೆ ನೀಡಬೇಕು. ಹಾಡುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯಶಿಕ್ಷಕರು ಸ್ವತಃ ಮುತುವರ್ಜಿವಹಿಸಬೇಕೆಂದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಕ್ಕಳಿಗೆ ಅನರ್ಹವಾಗಿರುವ ಅಶ್ಲೀಲ ಪದಗಳಿರುವ ಹಾಡುಗಳಿಗೆ ನೃತ್ಯ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮಕ್ಕಳ ತಪ್ಪಲ್ಲ, ಶಿಕ್ಷಕರು ಹಾಡಿನ ವಿಷಯವನ್ನು ಪರಿಶೀಲಿಸಿ ನಂತರ ಅನುಮತಿ ನೀಡಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.























































 
 

ಬೆಂಗಳೂರಿನ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ಮದ್ಯಪಾನ, ಧೂಮಪಾನ ಇತ್ಯಾದಿ ವಿಷಯಗಳನ್ನು ಒಳಗೊಂಡ ಹಾಡುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೆ, ವೇಷಭೂಷಣ ಆಯ್ಕೆಯಲ್ಲೂ ಶಿಕ್ಷಕರು ಗಮನಹರಿಸಬೇಕು. ವಿದ್ಯಾರ್ಥಿಗಳು ಸಭ್ಯ ಉಡುಪಿನಲ್ಲಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕೆಲವು ಖಾಸಗಿ ಶಾಲೆಗಳು ಈಗಾಗಲೇ ಈ ನಿಯಮವನ್ನು ಅನುಸರಿಸಿ, ವಾರ್ಷಿಕೋತ್ಸವಗಳಲ್ಲಿ ಚಿತ್ರಗೀತೆಗಳನ್ನು ಬಳಸುವುದನ್ನು ನಿಷೇಧಿಸಿವೆ. ಪ್ರತಿವರ್ಷ ವಿಭಿನ್ನ ಥೀಮ್‌ಗಳನ್ನು ಆಯ್ಕೆ ಮಾಡುತ್ತಿವೆ. ಚಿಕ್ಕ ಮಕ್ಕಳಿಗೆ ಹೂವು, ಪ್ರಾಣಿ, ಸಂಗೀತದಂತಹ ವಿಷಯಗಳ ಗೀತೆ ಬಳಸುತ್ತಿವೆ. ಹೈಸ್ಕೂಲ್ ವಿದ್ಯಾರ್ಥಿಗಳು ದೇಶಭಕ್ತಿ, ಇತಿಹಾಸ ಮತ್ತು ಜನಪದ ಗೀತೆಗಳಿಗೆ ನೃತ್ಯ ಮಾಡುತ್ತಿದ್ದಾರೆ ಎಂದು ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.

error: Content is protected !!
Scroll to Top