ಈ ಒಂದು ಪ್ರತಿಭಟನೆ ಮುಳುವಾಯಿತು
ಮುಂಬೈ: ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ನಾರಾಯಣ ರಾಣೆ ಅವರಿಗೆ ಸ್ಥಳೀಯ ಕೋರ್ಟ್ 1 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮೇಲೆ ಕೆಸರು ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧುದುರ್ಗದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನಿತೇಶ್ ರಾಣೆ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ದೋಷಿ ಎಂದು ಘೋಷಿಸಿದೆ.
ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆಯ ಜೊತೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಮೊತ್ತದಲ್ಲಿ 50 ಸಾವಿರ ರೂ. ಸಂತ್ರಸ್ತ ಇಂಜಿನಿಯರ್‌ಗೆ ಪರಿಹಾರವಾಗಿ ನೀಡಲು ಆದೇಶಿಸಿದೆ. ಶಾಸಕರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕ ಸೇವಕರ ಘನತೆಗೆ ಧಕ್ಕೆ ತರುವಂತೆ ವರ್ತಿಸಬಾರದು ತೀರ್ಪಿನಲ್ಲಿ ನ್ಯಾಯಾಲಯ ಉಲ್ಲೇಖಿಸಿದೆ.
ನ್ಯಾಯಾಲಯ ಈ ಶಿಕ್ಷೆಯನ್ನು ಪ್ರಕಟಿಸಿದ ಬಳಿಕ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಇದರಿಂದಾಗಿ ನಿತೇಶ್ ರಾಣೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಸಿಕ್ಕಿದ್ದು, ಸದ್ಯಕ್ಕೆ ಬಂಧನದಿಂದ ಪಾರಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ 29 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಮುಂಬೈ-ಗೋವಾ ಹೆದ್ದಾರಿಯ ಕಂಕಾವಳಿ ಭಾಗದಲ್ಲಿ ರಸ್ತೆಯ ಉದ್ದಕ್ಕೂ ದೊಡ್ಡ ಗುಂಡಿಗಳಿದ್ದವು ಮತ್ತು ಮಳೆಯಿಂದಾಗಿ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು. ರಸ್ತೆ ಅಗಲೀಕರಣ ಕಾಮಗಾರಿ ಅತ್ಯಂತ ಕಳಪೆಯಾಗಿ ನಡೆಯುತ್ತಿತ್ತು ಮತ್ತು ಸರಿಯಾಗಿ ಚರಂಡಿ ವ್ಯವಸ್ಥೆ ಮಾಡದ ಕಾರಣ ಪ್ರತಿದಿನ ಸಂಚರಿಸುತ್ತಿದ್ದ ಸಾವಿರಾರು ಜನರಿಗೆ ಸಮಸ್ಯೆಯಾಗುತ್ತಿತ್ತು. ದೂರು ನೀಡಿದ್ದರೂ ಸಮಸ್ಯೆ ಪರಿಹಾರ ಮಾಡದ್ದಕ್ಕೆ ಸಿಟ್ಟಾದ ರಾಣೆ 2019ರಲ್ಲಿ ಅಧಿಕಾರಿಗಳಿಗೆ ಪಾಠ ಕಲಿಸಲು ಬೆಂಬಲಿಗರ ಜೊತೆ ಸೇರಿ NHAI ಇಂಜಿನಿಯರ್ ಮೇಲೆ ಕೆಸರು ಎರಚಿ ಪ್ರತಿಭಟನೆ ನಡೆಸಿದ್ದರು.

























