ಉಪ್ಪಿನಂಗಡಿ: ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆಯೊಬ್ಬರು ಕೆಲ ದಿನಗಳ ಹಿಂದೆಯೇ ಮೃತಪಟ್ಟಿದ್ದು, ಜನಗಣತಿ ಲೆಕ್ಕ ತೆಗೆಯಲು ಮನೆಯತ್ತ ಜನರು ಬಂದಾಗಲೇ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ನಡೆದಿದೆ.
ಮೃತರನ್ನು ಇಳಂತಿಲದ ನೇಜಿಕಾರ್ ನಿವಾಸಿ ಸುಂದರಿ(65) ಎಂದು ಗುರುತಿಸಲಾಗಿದೆ.
ಎ. 14 ರಂದು ಸುಂದರಿ ಅವರನ್ನು ಸಾರ್ವಜನಿಕರು ನೋಡಿದ್ದರು. ಆ ಬಳಿಕ ಅವರನ್ನು ಯಾರೂ ನೋಡಿರಲಿಲ್ಲ. ಎ. 18 ರಂದು ಜನಗಣತಿಯ ಹಿನ್ನೆಲೆ ಒಬ್ಬರು ಅವರ ಮನೆಯತ್ತ ಹೋಗಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆದೇ ಇದ್ದು, ಒಳಗಿನಿಂದ ದುರ್ವಾಸನೆ ಬೀರುತ್ತಿತ್ತು.
ಜನಗಣತಿಗೆ ಬಂದ ಸಿಬ್ಬಂದಿ ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈ ವಿಷಯವನ್ನು ಪೊಲೀಸರಿಗೂ ತಿಳಿಸಲಾಯಿತು.
ಬೇರೆ ಊರಿನಲ್ಲಿದ್ದ ಅವರ ಪುತ್ರಿಗೂ ವಿಷಯ ತಿಳಿಸಿ, ಶವದ ಮರಣೋತ್ತರ ಪರೀಕ್ಷೆ ಸಹ ನಡೆಸಲಾಯಿತು. ಬಳಿಕ ಶವದ ಅಂತಿಮ ಸಂಸ್ಕಾರ ನಡೆಸಲಾಯಿತು.

























