ಲಷ್ಕರ್‌ನ ಟಾಪ್ ಕಮಾಂಡರ್ ಬಂದೂಕುಧಾರಿಗಳ ಗುಂಡಿಗೆ ಬಲಿ
ಇಸ್ಲಾಮಾಬಾದ್: ಲಷ್ಕರ್ ಇ ತಯ್ಯಬ ಉಗ್ರಗಾಮಿ ಸಂಘಟನೆಯ ಟಾಪ್ ಲೆವೆಲ್ ಕಮಾಂಡರ್ ಶೇಕ್ ಯೂಸುಫ್ ಆಫ್ರಿದಿ ಎಂಬಾತನನ್ನು ಅಜ್ಞಾತ ಬಂದೂಕುಧಾರಿಗಳು ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾದಲ್ಲಿ ಅತಿ ಸಮೀಪದಿಂದ ಗುಂಡಿಕ್ಕಿ ಸಾಯಿಸಿದ್ದಾರೆ. ಲಷ್ಕರ್‌ನ ಸ್ಥಾಪಕ ಹಾಫಿದ್ ಸಯೀದ್‌ನ ಅತಿ ನಿಕಟ ಕಮಾಂಡರ್ ಅಗಿದ್ದ ಆಫ್ರಿದಿಯನ್ನು ಬಂದೂಕುಧಾರಿಗಳು ತಪ್ಪಿಸಲು ಸಾಧ್ಯವೆ ಇಲ್ಲದ ರೀತಿಯಲ್ಲಿ ಖೆಡ್ಡಾಕ್ಕೆ ಕೆಡವಿ ಗುಂಡಿಕ್ಕಿದ್ದಾರೆ ಎಂದು ವರದಿಯಾಗಿದೆ.
ಆಫ್ರಿದಿ ಲಷ್ಕರ್‌ನ ಅತ್ಯುನ್ನತ ಕಮಾಂಡರ್ ಆಗಿದ್ದ ಮತ್ತು ಅಫಘಾನಿಸ್ತಾನದ ಗಡಿಗೆ ಒತ್ತಿಕೊಂಡಿರುವ ಖೈಬರ್ ಪಖ್ತೂನ್‌ಖ್ವಾದಲ್ಲಿ ಲಷ್ಕರ್ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಕಳೆದ ತಿಂಗಳಷ್ಟೆ ಲಷ್ಕರ್‌ನ ಇನ್ನೊಬ್ಬ ಪ್ರಮುಖ ನಾಯಕ ಆಮೀರ್ ಹಮ್ಜಾ ಎಂಬಾತನ ಮೇಲೆ ಲಾಹೋರ್‌ನಲ್ಲಿ ಗುಂಡಿಕ್ಕಲಾಗಿತ್ತು. ಗಂಭೀರವಾಗಿ ಗಾಯಗೊಂಡಿರುವ ಈತ ಬದುಕುಳಿದಿದ್ದಾನೆ ಎನ್ನಲಾಗಿದೆ. ಇದೇ ರೀತಿ ಕಳೆದ ಹಲವು ಸಮಯದಂದ ಪಾಕಿಸ್ತಾನದಲ್ಲಿ ಉಗ್ರ ಮುಖಂಡರನ್ನು ಹುಡುಕು ಹುಡುಕಿ ಸಾಯಿಸಲಾಗುತ್ತಿದೆ.
ಇನ್ನೊಂದು ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್‌ನ ಸ್ಥಾಪಕ ಮೌಲಾನ ಮಸೂದ್ ಅಜರ್‌ನ ಅಣ್ಣ ತಾಹಿರ್ ಅನ್ವರ್ ಕೆಲ ದಿನಗಳ ಹಿಂದೆ ನಿಗೂಢವಾಗಿ ಸತ್ತಿದ್ದಾನೆ. ಇದು ಕೂಡ ಅಜ್ಞಾತ ಬಂದೂಕುಧಾರಿಗಳ ಕೃತ್ಯ ಎನ್ನಲಾಗುತ್ತಿದೆ. ಆದರೆ ಈ ವಿಚಾರವನ್ನು ರಹಸ್ಯವಾಗಿಡಲಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಲಷ್ಕರ್ ಉಗ್ರ ಅಬು ಖತಲ್ ಅಲಿಯಾಸ್ ಖತಲ್ ಸಿಂಧಿ ಎಂಬಾತನನ್ನು ಗುಂಡಿಕ್ಕಿ ಸಾಯಿಸಲಾಗಿತ್ತು. 20ಕ್ಕೂ ಹೆಚ್ಚು ಉಗ್ರ ಮುಖಂಡರನ್ನು ಇದೇ ರೀತಿ ಸಾಯಿಸಲಾಗಿದೆ.

























