ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ

ವೆಬ್‌ಸೈಟ್‌, ಡಿಜಿಲಾಕರ್‌ನಲ್ಲೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಭ್ಯ

ಬೆಂಗಳೂರು : ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತರದಿಂದ ಕಾಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ.

ಈ ಬಾರಿ ರಾಜ್ಯದ ಒಟ್ಟು 2,870 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 8,65,988 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರ ಶೈಕ್ಷಣಿಕ ಬದುಕಿನ ಮೊದಲ ಮಹತ್ವದ ತಿರುವು ಇಂದು ನಿರ್ಧಾರವಾಗಲಿದೆ. ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ.























































 
 

ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡಲು ಸರ್ಕಾರ ಈ ಹಿಂದೆ ಚಿಂತಿಸಿತ್ತು. ಆದರೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಂಕಗಳನ್ನೇ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕುರಿತು ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶದ ಜೊತೆಗೆ ಇಂದಿನಿಂದ ರಾಜ್ಯಾದ್ಯಂತ ಸಿಇಟಿ ಪರೀಕ್ಷೆಗಳೂ ಆರಂಭವಾಗುತ್ತಿವೆ. ಈ ಬಾರಿ ದಾಖಲೆ ಮಟ್ಟದ ಅಂದರೆ 3,30,000 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ 163 ಕೇಂದ್ರಗಳಲ್ಲಿ ಅತಿ ಹೆಚ್ಚು ಅಂದರೆ 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ವಿದ್ಯಾರ್ಥಿಗಳು ವೆಬ್‌ಸೈಟ್, ಮೊಬೈಲ್ ಆಪ್, SMS/WhatsApp ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕ ಫಲಿತಾಂಶ ವೀಕ್ಷಿಸಬಹುದು. ಅದೇ ರೀತಿ ‘KarnatakaOne’ ಎನ್ನುವ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಮಂಡಳಿಯ ವತಿಯಿಂದಲೇ ನೇರವಾಗಿ ಫಲಿತಾಂಶದ ವಿವರಗಳನ್ನು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ರವಾನೆಯಾಗಲಿದೆ.

SSLC ಫಲಿತಾಂಶ ಚೆಕ್ ಮಾಡುವ ವಿಧಾನ

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಅಥವಾ https://karresults.nic.in/ಗೆ ಭೇಟಿ ನೀಡಿ. ಓಪನ್‌ ಆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಎಸ್‌ಎಸ್‌ಎಲ್‌ಸಿ ರಿಜಿಸ್ಟ್ರರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ಟೈಪ್‌ ಮಾಡಿ. ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿ. ಫಲಿತಾಂಶದ ಪೇಜ್‌ ಓಪನ್‌ ಆಗುತ್ತದೆ. ಡೌನ್‌ಲೋಡ್‌ ಮಾಡಿ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ಈ ವರ್ಷ ಮಂಡಳಿ ಪ್ರಥಮ ಬಾರಿಗೆ ವಿಶೇಷ ಹೆಜ್ಜೆಯೊಂದನ್ನು ಇಟ್ಟಿದ್ದು, ದ್ವಿತೀಯ ಪಿಯುಸಿಯಂತೆ ಎಸ್​ಎಸ್​ಎಲ್​ಸಿ ಅಂಕಪಟ್ಟಿಯನ್ನು ಫಲಿತಾಂಶ ಪ್ರಕಟವಾದ ತಕ್ಷಣವೇ ‘ಡಿಜಿಲಾಕರ್’ನಲ್ಲಿ ಲಭ್ಯವಾಗುವಂತೆ ಮಾಡಿದೆ. ಹೀಗಾಗಿ ಅಧಿಕೃತ ವೆಬ್‌ಸೈಟ್ ಮಾತ್ರವಲ್ಲದೆ, ವಿದ್ಯಾರ್ಥಿಗಳು DigiLocker ಮೂಲಕವೂ ತಮ್ಮ ಅಂಕಪಟ್ಟಿಯನ್ನು ಪಡೆಯಬಹುದು. ಆನ್​​ಲೈನ್​​ನಲ್ಲಿ ಚೆಕ್ ಮಾಡಲು ನೆಟ್ ಸ್ಲೋ, ಸರ್ವರ್ ಬ್ಯುಸಿ ಇದ್ದರೆ ಈ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಪಡೆದುಕೊಳ್ಳಬಹುದು.

ವೆಬ್‌ಸೈಟ್‌ಗಿಂತಲೂ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು. ಮೊದಲಿಗೆ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ‘DigiLocker’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು.

ಅಪ್ಲಿಕೇಶನ್ ತೆರೆದ ನಂತರ ಮುಖಪುಟದಲ್ಲಿ ಕಾಣುವ ‘ಡಾಕ್ಯುಮೆಂಟ್ ವರ್ಗಗಳ’ (Document Categories) ಅಡಿಯಲ್ಲಿ ‘ಶಿಕ್ಷಣ ಮತ್ತು ಕಲಿಕೆ’ (Education and Learning) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಹಲವಾರು ಶಿಕ್ಷಣ ಮಂಡಳಿಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಮ್ಮ ರಾಜ್ಯದ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ (KSEAB) ಅನ್ನು ಹುಡುಕಿ ಆಯ್ಕೆ ಮಾಡಿ.

ನಂತರದ ಸ್ಕ್ರೀನ್‌ನಲ್ಲಿ ‘Class X Marksheet’ ಅಥವಾ SSLC Marksheet’ ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ನಂತರ SSLC ನೋಂದಣಿ ಸಂಖ್ಯೆ (Roll Number/Registration Number) ಮತ್ತು ಪರೀಕ್ಷೆ ಬರೆದ ವರ್ಷವನ್ನು (2026) ನಮೂದಿಸಿ. ಆಧಾರ್ ಕಾರ್ಡ್‌ನಲ್ಲಿರುವಂತೆ ವಿವರಗಳನ್ನು ಗಮನಿಸಿ ನೋಡಿ ಸಬ್‌ಮಿಟ್ ಮಾಡಿ.

ಬಳಿಕ ಕರ್ನಾಟಕ SSLC ಫಲಿತಾಂಶ ಪರದೆಯ ಮೇಲೆ ಮೂಡುತ್ತದೆ. ಇದರಲ್ಲಿ ನಿಮ್ಮ ವಿಷಯವಾರು ಅಂಕಗಳು ಲಭ್ಯವಿರುತ್ತವೆ. ಅಲ್ಲಿರುವ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ರೂಪದಲ್ಲಿ ನಿಮ್ಮ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದಾಗಿದೆ.

error: Content is protected !!
Scroll to Top