ಮದುವೆ ಪ್ರಪೋಸ್‌ ನೆಪದಲ್ಲಿ ಪ್ರಿಯತಮನನ್ನು ಜೀವಂತ ದಹಿಸಿದ ಯುವತಿ

ವೆಸ್ಟರ್ನ್ ಸ್ಟೈಲ್‌ನಲ್ಲಿ ನಿನಗೆ ಪ್ರಪೋಸ್ ಮಾಡುವುದಾಗಿ ನಂಬಿಸಿ ಭೀಕರ ಕೃತ್ಯ

ಬೆಂಗಳೂರು : ‘ವೆಸ್ಟರ್ನ್ ಸ್ಟೈಲ್’ನಲ್ಲಿ ಪ್ರಪೋಸ್ ಮಾಡುತ್ತೇನೆ ಎಂದು ನಂಬಿಸಿ, ಪ್ರಿಯಕರನ ಕೈ-ಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಸುತ್ತಿ ಪೆಟ್ರೋಲ್ ಸುರಿದು ಪ್ರೇಯಸಿಯೇ ಜೀವಂತ ದಹಿಸಿರುವ ಪ್ರಕರಣ ಬ್ಯಾಡರಹಳ್ಳಿಯಲ್ಲಿ ಸಂಭವಿಸಿದೆ.

ಮೃತ ಕಿರಣ್ ಮತ್ತು ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಂಗಳವಾರ ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದಿದ್ದನ್ನು ನೋಡಿ ಕಿರಣ್ ಆಕೆಯ ಮನೆಗೆ ಬಂದಿದ್ದನು. ಈ ವೇಳೆ ಯುವತಿ ನಡೆಸಿದ ಕುಕೃತ್ಯಗಳು ಮೈ ನಡುಗಿಸುವಂತಿವೆ. “ನಿನಗೆ ವಿದೇಶಿ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ” ಎಂದು ಹೇಳಿದ ಯುವತಿ, ಕಿರಣ್‌ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಕಿರಣ್ “ಯಾಕೆ ಇಷ್ಟು ಟೈಟ್ ಆಗಿ ಕಟ್ತಿದ್ದೀಯಾ?” ಎಂದು ಕೇಳಿದಾಗ, “ಇದು ಫಾರಿನ್ ಸ್ಟೈಲ್, ಸುಮ್ಮನಿರು” ಎಂದು ನಂಬಿಸಿದ್ದಾಳೆ.























































 
 

ಕಿರಣ್ ಸಂಪೂರ್ಣ ಅಸಹಾಯಕನಾದ ಮೇಲೆ ಆಕೆ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲಾಗದೆ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭೀಕರ ಕೃತ್ಯ ನಡೆಯುವ ದೃಶ್ಯವನ್ನು ಯುವತಿ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾಳೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಆರಂಭದಲ್ಲಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಯುವತಿ, “ನಾನು ಟಾಯ್ಲೆಟ್‌ನಲ್ಲಿದ್ದೆ, ಆಗ ಸೌಂಡ್ ಬಂತು. ಹೊರಬಂದು ನೋಡಿದಾಗ ಕಿರಣ್ ಬೆಂಕಿ ಹಚ್ಚಿಕೊಂಡಿದ್ದ” ಎಂದು ಕಥೆ ಕಟ್ಟಿದ್ದಳು. ಆದರೆ ಕಿರಣ್ ಬೈಕ್‌ನಲ್ಲಿ ಬಂದಾಗ ಯಾವುದೇ ಪೆಟ್ರೋಲ್ ಕ್ಯಾನ್ ತಂದಿರಲಿಲ್ಲ ಎಂಬುದು ಸಿಸಿಟಿವಿ ಮತ್ತು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರಿಂದಾಗಿ ಪೆಟ್ರೋಲ್ ಅನ್ನು ಯುವತಿಯೇ ಮೊದಲೇ ತಂದಿಟ್ಟಿದ್ದಳು ಎಂಬ ಅನುಮಾನ ದಟ್ಟವಾಗಿದೆ.

ಘಟನೆ ಸಂಭವಿಸಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಬ್ಯಾಡರಹಳ್ಳಿ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರೀತಿಯ ಹೆಸರಲ್ಲಿ ಇಷ್ಟೊಂದು ಭೀಕರ ಕೃತ್ಯ ಎಸಗಲು ಕಾರಣವೇನು? ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದೇಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಈಗ ಮತ್ತಷ್ಟು ಆಘಾತಕಾರಿ ವಿಚಾರಗಳು ಬಯಲಾಗಿವೆ. ಪ್ರಿಯಕರ ಕಿರಣ್‌ನನ್ನು ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿ ಪ್ರೇಮಾ ಸ್ಕೆಚ್ ಹಾಕಿದ್ದಳು ಎಂಬ ವಿಚಾರ ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ. ಅಲ್ಲದೆ, ಅದಕ್ಕಾಗಿ ಏನೇನು ಸಿದ್ಧತೆ ಮಾಡಿಕೊಂಡಿದ್ದಳು ಎಂಬುದೂ ಗೊತ್ತಾಗಿದೆ.

ಪ್ರಿಯಕರ ಕಿರಣ್‌ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ಪ್ರೇಮಾ ಕೂಡ ಅದೇ ಬೆಂಕಿಯಲ್ಲಿ ಆಹುತಿಯಾಗಲು ನಿರ್ಧರಿಸಿದ್ದಳು. ಒಂದು ವೇಳೆ ಬೆಂಕಿಯಿಂದ ಬದುಕುಳಿದರೆ ಆತ್ಮಹತ್ಯೆ ಮಾಡಿಕೊಳ್ಳಲು ರೂಮಿನಲ್ಲಿ ವಿಷದ ಬಾಟಲಿ ಹಾಗೂ ಮಾತ್ರೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದಳು. ಆದರೆ, ಕಿರಣ್ ಬೆಂಕಿಯಲ್ಲಿ ನರಳುತ್ತಾ ಕಿರುಚಾಡುತ್ತಿದ್ದಾಗ ಬೆಂಕಿಯ ತೀವ್ರತೆ ಹೆಚ್ಚಾದ ಕಾರಣ ಪ್ರೇಮಾ ಭಯಬಿದ್ದು ಹೊರಕ್ಕೆ ಓಡಿ ಬಂದಿದ್ದಾಳೆ. ಅರೆಬರೆ ಬಟ್ಟೆಯಲ್ಲಿದ್ದ ಆಕೆಯನ್ನು ಕಂಡು ಪಕ್ಕದ ಮನೆಯ ಮಹಿಳೆ ಮಾನವೀಯತೆಯ ದೃಷ್ಟಿಯಿಂದ ಬಟ್ಟೆ ನೀಡಿ ರಕ್ಷಿಸಿದ್ದರು.

ಕಳೆದ ನಾಲ್ಕು ವರ್ಷಗಳಿಂದ ಪರಿಚಿತರಾಗಿದ್ದ ಕಿರಣ್ ಮತ್ತು ಪ್ರೇಮಾ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಕಿರಣ್, ಪ್ರೇಮಾಳನ್ನು ಕಡೆಗಣಿಸಿ ತನ್ನ ಹಳೆಯ ಪ್ರಿಯತಮೆಯ ಜೊತೆ ಮತ್ತೆ ಸಂಪರ್ಕದಲ್ಲಿದ್ದ. ಮಾಜಿ ಪ್ರಿಯತಮೆಯ ಹುಟ್ಟುಹಬ್ಬವನ್ನು ಆಚರಿಸಿ ಕಿರಣ್ ಫೋಟೋಗಳನ್ನು ತೆಗೆಸಿಕೊಂಡಿದ್ದ. ಇದನ್ನು ಕಂಡು ಆಕ್ರೋಶಗೊಂಡ ಪ್ರೇಮಾ ಕಿರಣ್ ಜೊತೆ ಜಗಳವಾಡಿದ್ದಳು. ಕಿರಣ್ ಆಕೆಯ ನಂಬರ್ ಬ್ಲಾಕ್ ಮಾಡಿದ್ದರಿಂದ ಸೇಡು ಮತ್ತಷ್ಟು ಹೆಚ್ಚಾಗಿತ್ತು.

‘ನೀನು ಹೇಳಿದ ದಿನವೇ ನಾವು ಮದುವೆಯಾಗೋಣ’ ಎಂದು ನಂಬಿಸಿ ಕಿರಣ್‌ನನ್ನು ಪ್ರೇಮಾ ತನ್ನ ಮನೆಗೆ ಕರೆಸಿಕೊಂಡಿದ್ದಳು. ಕೇವಲ ಎರಡು ದಿನಗಳಲ್ಲಿ ಕೊಲೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡಿದ್ದ ಈಕೆ, ಆನ್‌ಲೈನ್‌ನಲ್ಲಿ ಹ್ಯಾಂಡ್‌ಕಪ್ (ಕೈಕೋಳ) ಬೆಲ್ಟ್ ಖರೀದಿಸಿದ್ದಳು ಎನ್ನಲಾಗಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಪ್ರೇಮಾಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

error: Content is protected !!
Scroll to Top