ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ಸಾವಿನ ಸಂಖ್ಯೆ 23ಕ್ಕೇರಿಕೆ

ಸ್ಫೋಟದ ಬಿರುಸಿಗೆ ನಾಲ್ಕು ಮಹಡಿಯ ಕಟ್ಟಡ ಧರಾಶಾಯಿ

ಚೆನ್ನೈ: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೇರಿದೆ. ಭಾನುವಾರ ಮಧ್ಯಾಹ್ನ ವಿರುಧುನಗರ ಜಿಲ್ಲೆಯ ಕಟ್ಟನಾರ್‌ಪಟ್ಟಿ ಗ್ರಾಮದ ಬಳಿಯಿರುವ ವನಜ ಪಟಾಕಿ ತಯಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಕಟ್ಟಡವು ಸಂಪೂರ್ಣವಾಗಿ ನೆಲಸಮವಾಗಿದೆ.

ಗಾಯಾಳುಗಳನ್ನು ವಿರುಧುನಗರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಮಧುರೈ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿಯಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.























































 
 

ಪ್ರಾಥಮಿಕ ತನಿಖೆಯ ಪ್ರಕಾರ ಪಟಾಕಿ ತಯಾರಿಕೆಗೆ ಬೇಕಾದ ರಾಸಾಯನಿಕಗಳನ್ನು ಮಿಶ್ರಣ ಮಾಡುವಾಗ ಸಂಭವಿಸಿದ ಘರ್ಷಣೆಯಿಂದ ಈ ಭೀಕರ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ.

ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ ಸುಮಾರು 5 ಕಿಲೋಮೀಟರ್ ದೂರದವರೆಗೂ ಶಬ್ದ ಕೇಳಿಸಿದೆ. ಕಾರ್ಖಾನೆಯ ನಾಲ್ಕು ಮಹಡಿ ಕಟ್ಟಡ ಸಂಪೂರ್ಣವಾಗಿ ಕುಸಿದಿದೆ.

ಈ ಫ್ಯಾಕ್ಟರಿಯಲ್ಲಿ ಸುಮಾರು 150 ಕಾರ್ಮಿಕ ಇದ್ದರು. ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಸಾಮಾನ್ಯವಾಗಿ ಭಾನುವಾರ ಈ ಕಾರ್ಖಾನೆಗೆ ರಜೆ ನೀಡಲಾಗುತ್ತಿತ್ತು. ಆದರೆ ವಿಧಾನಸಭಾ ಚುನಾವಣೆಗಾಗಿ ಏಪ್ರಿಲ್ 23 ರಂದು ರಜೆ ನೀಡಬೇಕಾಗಿರುವುದರಿಂದ ಭಾನುವಾರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಷ್ಟು ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರು ಎನ್ನುವುದು ತಿಳಿದು ಬಂದಿಲ್ಲ.

ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಲು ಸಚಿವರಾದ ಕೆ.ಕೆ.ಎಸ್.ಎಸ್.ಆರ್. ರಾಮಚಂದ್ರನ್ ಮತ್ತು ತಂಗಂ ತೆನ್ನರಸು ಅವರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.
ನಿರ್ಲಕ್ಷ್ಯ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಕಾರ್ಖಾನೆಯ ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದ ಕೂಡಲೇ ಮಾಲೀಕರು ತಲೆಮರೆಸಿಕೊಂಡಿದ್ದು, ಪೊಲೀಸರು ಈಗ ಶೋಧ ನಡೆಸುತ್ತಿದ್ದಾರೆ.

error: Content is protected !!
Scroll to Top