ಉದ್ಯಮಿಯ ಸೋಗುಹಾಕಿ ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಯುವಕ
ಬೆಂಗಳೂರು: ಕಸ್ಟಮ್ಸ್ ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿ ಕೃಪಲಾನಿ (36) ಎಂಬಾತ ಪ್ರೀತಿ, ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ಇನ್ನೂ 50 ಮಂದಿಗೆ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೃಪಲಾನಿ ಮೇಲಿದೆ. ಆರೋಪಿ ಕೃಪಲಾನಿ ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸುಮಾರು ಆರೇಳು ವರ್ಷಗಳಿಂದ ಅಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಕಸ್ಟಮ್ಸ್ ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಕೇಸಲ್ಲಿ ಪುಲಕೇಶಿ ನಗರ ಪೊಲೀಸರು ಕೃಪಲಾನಿಯನ್ನು ಬಂಧಿಸಿದ್ದರು. ಆರೋಪಿ ವಿಚಾರಣೆ ವೇಳೆ 50 ಜನರಿಗೆ ಬ್ಲಾಕ್‌ಮೇಲ್ ಮಾಡಿರೋದು ಪತ್ತೆಯಾಗಿದೆ. ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಆರೋಪಿ ಕೃಪಲಾನಿ ಟಾರ್ಗೆಟ್ ಮಾಡುತ್ತಿದ್ದ. ಉದ್ಯಮಿ ಎಂದು ಸರ್ಕಾರಿ ಮಹಿಳಾ ಅಧಿಕಾರಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಕಸ್ಟಮ್ಸ್, ಜಿಎಸ್‌ಟಿ ಅಧಿಕಾರಿಗಳೇ ಈತನ ಟಾರ್ಗೆಟ್ ಆಗಿದ್ದರು.
ಪರಿಚಯ ಮಾಡಿಕೊಂಡು ಲಂಚ್, ಡಿನ್ನರ್, ಪಾರ್ಟಿ ಅಂತಾ ಸಲುಗೆ ಬೆಳಸಿಕೊಳ್ಳುತ್ತಿದ್ದ ಈತ, ಬಳಿಕ ಪ್ರೀತಿ, ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ ಮಾಡುತ್ತಿದ್ದ. ನಂತರ ಅದನ್ನು ವೀಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸ್ಫೋಟಕ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಪುಲಕೇಶಿ ನಗರ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದಲ್ಲದೆ ಇಲೆಕ್ಟ್ರಾನಿಕ್ ವಸ್ತುಗಳನ್ನು ವಿದೇಶ ಹಾಗೂ ನೆರೆ ರಾಜ್ಯಗಳಿಗೆ ಆಮದು ಮತ್ತು ರಫ್ತು ವ್ಯವಹಾರ ನಡೆಸುತ್ತಿದ್ದ ಆರೋಪಿ ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಸಾಕಷ್ಟು ಅಕ್ರಮ ಎಸಗಿದ್ದಾನೆ ಎಂಬುದು ಗೊತ್ತಾಗಿದೆ. ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯ ಕೆಲವೊಂದು ನ್ಯೂನ್ಯತೆಗಳನ್ನು ಬಂಡವಾಳ ಮಾಡಿಕೊಂಡು ಆರೇಳು ವರ್ಷಗಳಿಂದ ಬ್ಲ್ಯಾಕ್‌ಮೇಲ್ ಮಾಡಿ, ಆಕೆಯಿಂದ ಅವರ ಸಹೋದ್ಯೋಗಿಗಳ ಮಾಹಿತಿ ಸಂಗ್ರಹಿಸಿ ಕೊಂಡಿದ್ದಾನೆ. ಬಳಿಕ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾನೆ.
ಸಂತ್ರಸ್ತೆಯನ್ನು ಪ್ರೀತಿಸುವ ನಾಟಕವಾಡಿ ಲೈಂಗಿಕವಾಗಿ ಕೂಡ ಬಳಸಿಕೊಂಡಿದ್ದಾನೆ. ತಾನು ಹೇಳಿದಂತೆ ಕೇಳದಿದ್ದರೆ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸುಮಾರು ಆರೇಳು ವರ್ಷ ಆರೋಪಿಯ ದೌರ್ಜನ್ಯ ಸಹಿಸಿಕೊಂಡಿದ್ದ ಸಂತ್ರಸ್ತೆ ಕೊನೆಗೆ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಘಟನೆ ನಡೆದ ಸ್ಥಳದ ಆಧಾರದ ಮೇರೆಗೆ ಇಂದಿರಾನಗರ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದಾರೆ. ಆರೋಪಿಯ ಬಂಧನಕ್ಕೆ ಪುಲಕೇಶಿನಗರ ಉಪವಿಭಾಗದ ಎಸಿಪಿ ಮತ್ತು ಇಂದಿರಾನಗರ ಠಾಣಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

























