10 ಸಾವಿರ ರೂ. ಮೇಲ್ಪಟ್ಟ ಯುಪಿಐ ಪಾವತಿಗೆ ಹೊಸ ನಿಯಮ : ಆರ್‌ಬಿಐ ಚಿಂತನೆ

ಡಿಜಿಟಲ್‌ ವಂಚನೆ ತಡೆಯುವ ಸಲುವಾಗಿ ನಿಯಮ ಬದಲಾವಣೆಗೆ ಮುಂದಾದ ಆರ್‌ಬಿಐ

ನವದೆಹಲಿ: ಯುಪಿಐ ಮೂಲಕ 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ಹಣ ತಕ್ಷಣ ಕಡಿತವಾಗದೆ ಒಂದು ಗಂಟೆ ಬಳಿಕ ಕಡಿತವಾಗುವಂತೆ ಮಾಡಲು ಆರ್‌ಬಿಐ ಮುಂದಾಗಿದೆ. ಡಿಜಿಟಲ್ ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ತಕ್ಷಣ ದುಡ್ಡು ಕಡಿತವಾಗುವುದಿಲ್ಲ. ಬದಲಿಗೆ ಆ ಹಣವನ್ನು ಬ್ಯಾಂಕ್ ಒಂದು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುತ್ತದೆ.

ಆರ್‌ಬಿಐ ನಿಯಮದ ಪ್ರಕಾರ 10 ಸಾವಿರ ರೂ.ಗಿಂತ ಹೆಚ್ಚಿನ ಹಣವನ್ನು ಯಾರ ಖಾತೆಗೆ ವರ್ಗಾಯಿಸಿರುತ್ತೀರೋ ಆ ಹಣ ತಕ್ಷಣ ಪಾವತಿ ಆಗುವುದಿಲ್ಲ ಅಥವಾ ಕಳುಹಿಸಿದವರ ಖಾತೆ ಸೇರುವುದಿಲ್ಲ. ನೀವು ಕಳಿಸಿದ ಹಣವನ್ನು ಬ್ಯಾಂಕ್ ಒಂದು ಗಂಟೆ ಕಾಲ ಹಿಡಿದಿಟ್ಟುಕೊಳ್ಳುತ್ತದೆ. ಬಳಿಕ ಯಾರ ಖಾತೆ ಸೇರಬೇಕೋ ಆ ಖಾತೆಗೆ ಜಮೆಯಾಗುತ್ತದೆ.























































 
 

ಒಂದು ವೇಳೆ ತಪ್ಪಾಗಿ ಅಥವಾ ಗೊತ್ತಿಲ್ಲದೆ ಹಣ ವರ್ಗಾವಣೆಯಾಗಿದ್ದರೆ ಒಂದು ಗಂಟೆಯ ಕಾಲವಕಾಶದ ಒಳಗೆ ಈ ಪಾವತಿಯನ್ನು ರದ್ದು ಮಾಡಲು ಗ್ರಾಹಕರಿಗೆ ಅವಕಾಶ ಸಿಗುತ್ತದೆ. ಕಳೆದ ವರ್ಷ ಭಾರತದಲ್ಲಿ 22,931 ಕೋಟಿ ರೂ. ಡಿಜಿಟಲ್ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಜೊತೆಗೆ ದೇಶದಲ್ಲಿ 10 ಸಾವಿರ ರೂ.ಗಿಂತ ಹೆಚ್ಚಿನ ಹಣ ವರ್ಗಾವಣೆ ಪ್ರಕರಣಗಳಲ್ಲಿ ಹೆಚ್ಚಿನ ವಂಚನೆ, ತಪ್ಪಾಗಿ ಹಣ ವರ್ಗಾವಣೆ ವರದಿಯಾಗುತ್ತಿರುವ ಹಿನ್ನೆಲೆ ಆರ್‌ಬಿಐ ಈ ಪ್ರಸ್ತಾವನೆ ಬಗ್ಗೆ ಚಿಂತಿಸಿದೆ.

ಈ ನಿರ್ಧಾರ ನಿತ್ಯದ ಪಾವತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಂದರೆ ಅಂಗಡಿಗಳಲ್ಲಿ ಖರೀದಿಯ ಮೇಲಿನ ಪಾವತಿಗಳು, ಇಎಂಐಗಳು, ಮ್ಯೂಚುವಲ್ ಫಂಡ್ ಎಸ್‌ಐಪಿ, ಎಲ್‌ಐಸಿ ಪ್ರೀಮಿಯಂ ಕಡಿತಗಳು, ಸಬ್‌ಸ್ಕ್ರಿಪ್ಪನ್‌ಗಳ ಮೇಲೆ ಈ ಹೊಸ ನಿಯಮವು ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ ಬಳಕೆದಾರರು ನಿರ್ದಿಷ್ಟ ವ್ಯಕ್ತಿಗಳ ಪಟ್ಟಿ ಮಾಡುವ ಮೂಲಕ ಆ ವ್ಯಕ್ತಿಗಳಿಗೆ ಯಾವುದೇ ಅಡೆತಡೆ ಇಲ್ಲದೆ ಹಣದ ವರ್ಗಾವಣೆಯಾಗುವಂತೆ ನೋಡಿಕೊಳ್ಳಬಹುದಾಗಿದೆ. ಅನುಮಾನಾಸ್ಪದ ಹಾಗೂ ಹೊಸ ವರ್ಗಾವಣೆಗಳಿಗೆ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ.

error: Content is protected !!
Scroll to Top