ಉಡುಪಿ: ಗಂಡ ಹೆಂಡತಿ ಒಂದೇ ಮನೆಯಲ್ಲಿ ಇದ್ದರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಇದೀಗ ಪತಿ ತನ್ನ ಪತ್ನಿಯ ವಿರುದ್ಧ ಚಿನ್ನ ಕದ್ದ ಆರೋಪ ಹೊರಿಸಿದ್ದಾರೆ.
ಪತ್ನಿ ವನಿತಾ ಅವರು ಮನೆಯ ಕಪಾಟಿನಲ್ಲಿದ್ದ ಬ್ಯಾಂಕ್ ಲಾಕರ್ ಕೀ ಕದ್ದು ಚಿನ್ನ ಎಗರಿಸಿದ್ದಾಗಿ ಪತಿ ಉಚ್ಚಿಲದ ಕಿರಣ್ ಕುಮಾರ್ ಅವರು ಆರೋಪಿಸಿರುವುದಾಗಿದೆ.
ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಲೆಕ್ಟಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುವ ಕಿರಣ್ ಕುಮಾರ್ ಅವರು ವನಿತಾ ಎಂಬುವವರೊಂದಿಗೆ 2016 ರಲ್ಲಿ ಮದುವೆಯಾಗಿದ್ದು, ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಬೇರೆ-ಬೇರೆ ಯಾಗಿ ಜೀವನ ಸಾಗಿಸುತ್ತಿದ್ದಾರೆ. ಕಿರಣ್ ಅವರಿಗೆ ಸಂಬಂಧಪಟ್ಟ ದಾಖಲಾತಿಗಳು ಹಾಗೂ ಉಡುಪಿ ಶಾಖೆಯ ಐಡಿಬಿಐ ಬ್ಯಾಂಕ್ ಲಾಕರ್ ಕೀಯನ್ನು ಮನೆಯ ಅಲ್ಮಾರಿನಲ್ಲಿ ಇಟ್ಟಿದ್ದರು. ಏಪ್ರಿಲ್ 10ರಂದು ಕಿರಣ್ ಕೆಲಸಕ್ಕೆ ಹೋಗಿದ್ದಾಗ ವನಿತಾ ಅವರು ಕೀ ಮೇಕರ್ ಸಹಾಯದಿಂದ ಅಲ್ಮಾರಿ ಒಡೆದು ಅದರೊಳಗಿದ್ದ ಬ್ಯಾಂಕ್ ಲಾಕರ್ ಕೀ ಯನ್ನು ಕಳವು ಮಾಡಿ ಬ್ಯಾಂಕ್ ಶಾಖೆಯಿಂದ 23,67,690 ರೂ ಮೌಲ್ಯದ 169 ಗ್ರಾಂ ಚಿನ್ನ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

























