ಅಲುಂಬುಡ: 2026ನೆ ಸಾಲಿನ ಎವಿಜಿ ಸಾಪ್ತಾಹಿಕ ಬೇಸಿಗೆ ಶಿಬಿರವು ಏಪ್ರಿಲ್ 16ರಂದು ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ವರ್ಣರಂಜಿತವಾಗಿ ಸಮಾಪನಗೊಂಡಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾರತ ಮಾತೆಗೆ ಪುಷ್ಪಾರ್ಚನೆಗೈದು, ದೀಪ ಪ್ರಜ್ವಲಿಸಿ ಮಾತನಾಡಿದ ಪುತ್ತೂರಿನ ಗಾನಕೋಗಿಲೆ, ಸಾವಿರಾರು ಗಾಯನ ಕಂಠಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಗಾನಸಿರಿ ಖ್ಯಾತಿಯ ಡಾ. ಕಿರಣ್ ಕುಮಾರ್ ಅವರು ಮಾತನಾಡಿ ಮಾತಾಪಿತರನ್ನು ಗೌರವಿಸುವವರು ಜೀವನದಲ್ಲಿ ಸೋತಿಲ್ಲ ಎಂದರು. ಅಂತಹ ಸಂಸ್ಕಾರ ಈ ಎವಿಜಿ ಶಾಲೆಯಲ್ಲಿ ಸಿಗುತ್ತಿದೆ.

ಎವಿಜಿ ಕಲಾ ಪ್ರಶಸ್ತಿ 2026
ಈ ಶುಭ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವೇಣುಗೋಪಾಲ್ ಮೇಲ್ಮಜಲು ಇವರಿಗೆ ಪ್ರತಿಷ್ಠಿತ ‘ಎವಿಜಿ ಕಲಾ ಪ್ರಶಸ್ತಿ 2026’ನ್ನು ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಮೇಲ್ಮಜಲುರವರು ಸನ್ಮಾನಗಳು ಕಲಾವಿದನ ಕಲೆಯನ್ನು ಗುರುತಿಸುವ ಕೆಲಸವಾಗಿದ್ದು ಅದು ಕಲೆಯನ್ನು ಉದ್ದೀಪಿಸುತ್ತಿದೆ ಎಂದರು.
ಎವಿಜಿ ಶಾಲಾ ಶಿಕ್ಷಕಿ ಅನುರಾಧಾ ಅವರು ಸಮಾರೋಪದ ನುಡಿಗಳನ್ನಾಡಿ ಶಿಬಿರದ ಅನ್ಯಾನ್ಯ ಚಟುವಟಿಕೆಗಳು ಮತ್ತು ಭಾರತದ ಭವಿಷ್ಯಗಳಾದ ಚಿಣ್ಣರು ಭಾಗವಹಿಸಿ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ವೃದ್ಧಿ ಮಾಡಿಕೊಂಡ ಬಗೆಯನ್ನು ಪ್ರಸ್ತುತಪಡಿಸಿದರು. ಆ ಮೂಲಕ ಎವಿಜಿ ಶಾಲೆಯು ಸಮಾಜ ನಿರ್ಮಾಣಕ್ಕೆ ಕೊಡುತ್ತಿರುವ ಕೊಡುಗೆಯನ್ನು ವಿಶ್ಲೇಷಿಸಿದರು.
ಸಭಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಶಾಲಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ ಶಿಬಿರದ ಕೊನೆಯಲ್ಲಿ ನಾವು ಇಬ್ಬರು ಸಂಗೀತಜ್ಞರನ್ನು ವೇದಿಕೆಯಲ್ಲಿ ಹೊಂದಿರುವುದು ವಿಶೇಷವಾಗಿದೆ ಎಂದು ಹೇಳಿ ಸಂಗೀತವು ವ್ಯಕ್ತಿಯ ಮನಸ್ಸನ್ನು ಸಂತುಲಿತವಾಗಿಸುತ್ತದೆ. ಅದರಿಂದಾಗಿ ಅವನ ವ್ಯಕ್ತಿತ್ವ ಹಸನಾಗುತ್ತದೆ. ಆದ್ದರಿಂದ ಈ ಶಿಬಿರಕ್ಕೆ ಹಾಜರಾದ ಮಕ್ಕಳಿಗೂ, ಪೋಷಕರಿಗೂ, ಸಂಪನ್ಮೂಲ ವ್ಯಕ್ತಿಗಳಿಗೂ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಭಾರಿಯಾಗಿದೆ ಎಂದರು.
ಶಾಲಾ ಸಂಚಾಲಕ ಎ.ವಿ. ನಾರಾಯಣರು ಶುಭ ಹಾರೈಸಿದರು. ಪ್ರಾಂಶುಪಾಲ ಅಮರನಾಥ್ ಪಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಾಲಾ ಉಪಾಧ್ಯಕ್ಷ ಉಮೇಶ್ ಮಳುವೇಲು ಮತ್ತು ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಗಳಾದ ಜ್ಞಾನ, ಅನಿಕಾ , ಚೇತನ ಕೀರ್ತಿ ಮತ್ತು ಶಿವಿಕಾ ಪ್ರಾರ್ಥನೆ, ವಿಖ್ಯಾತ್ ಸಂವಿಧಾನ ಪೀಠಿಕೆ ವಾಚನ, ಶಿಕ್ಷಕಿಯಾರಾದ ರೀಮಾ ಲೋಬೊ ಸ್ವಾಗತ, ಹರ್ಷಿತಾ ಧನ್ಯವಾದ ಮತ್ತು ಶ್ವೇತಾ ನಿರೂಪಣೆಗಳಲ್ಲಿ ಸಹಕರಿಸಿದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ ತಾರಾನಾಥ ಸವಣೂರು, ರಮೇಶ್ ಉಳಯ ಮತ್ತು ಚರಣ್ ಪುದು ಇವರನ್ನು ಗೌರವಿಸಲಾಯಿತು. ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಶಿಕ್ಷಕಿ ಚಂದ್ರಿಕಾ ಸನ್ಮಾನಿತರನ್ನು ಪರಿಚಯಿಸಿದರು.
ಆರಂಭದಲ್ಲಿ ಶಿಬಿರದ ನಾಟಕ ‘ಅಕ್ಷಯ ಪಾತ್ರೆ’ ಪ್ರದರ್ಶನಗೊಂಡಿತು.

























