ಹಿಂದೂ ಉದ್ಯೋಗಿಗಳನ್ನು ಆಮಿಷವೊಡ್ಡಿ, ಬೆದರಿಕೆ ಹಾಕಿ ಮತಾಂತರಕ್ಕೆ ಯತ್ನಿಸಿದ ಪ್ರಕರಣ
ನಾಸಿಕ್: ಲವ್ ಜಿಹಾದ್, ಮತಾಂತರ ಮತ್ತು ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಭಾರತದ ಪ್ರತಿಷ್ಠಿತ ಟಾಟಾ ಸಮೂಹದ ದೈತ್ಯ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ತನ್ನ ನಾಸಿಕ್ ಕಚೇರಿಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೇವಲ ಕೆಲಸದ ಕಿರುಕುಳ ಎಂದು ಆರಂಭವಾದ ದೂರುಗಳು ಈಗ ಅತ್ಯಾಚಾರ, ಮತಾಂತರದ ಸಂಚು ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳಂತಹ ಭಯಾನಕ ಸ್ವರೂಪ ಪಡೆದುಕೊಂಡಿವೆ.
ನಾಸಿಕ್ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್ ಈ ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಇದು ಕೇವಲ ವೈಯಕ್ತಿಕ ಘರ್ಷಣೆಯಲ್ಲ, ಬದಲಿಗೆ ಇದೊಂದು ಸಂಘಟಿತ ಜಾಲದಂತೆ ಕಂಡುಬರುತ್ತಿದೆ. ಹಿರಿಯ ಅಧಿಕಾರಿಗಳೇ ತಮ್ಮ ಕೈಕೆಳಗಿನ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತನಿಖೆಯ ತೀವ್ರತೆಯನ್ನು ಪರಿಗಣಿಸಿ ಪ್ರಕರಣದ ವಿವರಗಳನ್ನು ಭಯೋತ್ಪಾದನಾ ನಿರೋಧಕ ದಳ ಮತ್ತು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಲಾಗಿದೆ. ಈ ಜಾಲಕ್ಕೆ ವಿದೇಶಿ ಹಣಕಾಸಿನ ನೆರವು ಅಥವಾ ಅಂತಾರಾಷ್ಟ್ರೀಯ ಸಂಪರ್ಕಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಎಫ್‌ಐಆರ್ ದಾಖಲಾದ ಪ್ರಮುಖ ಆರೋಪಿಗಳು ಪ್ರಸ್ತುತ ಎಂಟು ಉದ್ಯೋಗಿಗಳ ವಿರುದ್ಧ 9 ಎಫ್‌ಐಆರ್‌ಗಳು ದಾಖಲಾಗಿದ್ದು, ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ.
ನಿದಾ ಖಾನ್ ಎಂಬಾಕೆ ಈ ಸಂಸ್ಥೆಯ ಎಚ್‌ಆರ್ ಹೆಡ್ ಆಗಿದ್ದು, ಆಕೆಯೇ ಮತಾಂತರ ಜಾಲದ ಸೂತ್ರಧಾರಿ ಎನ್ನಲಾಗಿದೆ. ಪ್ರಸ್ತುತ ಆಕೆ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆಯನ್ನು ಹುಡುಕುತ್ತಿದ್ದಾರೆ. ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಸತ್ಯಶೋಧನೆಗಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಏಪ್ರಿಲ್ 18ರಂದು ನಾಸಿಕ್‌ಗೆ ಭೇಟಿ ನೀಡಿ ಸಂತ್ರಸ್ತರಿಂದ ಮಾಹಿತಿ ಸಂಗ್ರಹಿಸಲಿದೆ.
ದೌರ್ಜನ್ಯಕ್ಕೊಳಗಾದ ಹೆಚ್ಚಿನ ಮಹಿಳೆಯರು ಅಥವಾ ಪುರುಷ ಉದ್ಯೋಗಿಗಳು ಇದ್ದಲ್ಲಿ, ಅವರು ಯಾವುದೇ ಭಯವಿಲ್ಲದೆ ಮುಂದೆ ಬಂದು ದೂರು ನೀಡುವಂತೆ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ. ಕೆಲಸದ ಸ್ಥಳದ ಸುರಕ್ಷತೆಯ ಬಗ್ಗೆ ಈಗ ದೊಡ್ಡ ಮಟ್ಟದ ಆತಂಕ ಮೂಡಿದ್ದು, ಕಾರ್ಪೊರೇಟ್ ವಲಯದಲ್ಲಿ ಇಂತಹ ‘ಸಂಘಟಿತ ಮತಾಂತರ’ದ ಯತ್ನಗಳು ನಡೆಯುತ್ತಿರುವುದು ಬೆಚ್ಚಿಬೀಳಿಸುವಂತಿದೆ.

























