ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡುವುದು ಕಡ್ಡಾಯ : ಹೈಕೋರ್ಟ್‌ ತೀರ್ಪು

ಅಸಂಘಟಿತ ವಲಯಕ್ಕೂ ವಿಸ್ತರಿಸಲು ಸಮಗ್ರ ನೀತಿ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು : ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ 18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಋತುಸ್ರಾವ ರಜೆ ನೀತಿಯನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಕೋರ್ಟ್ ಎಂದು ನಿರ್ದೇಶಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಮಹಿಳೆಯರ ಮುಟ್ಟಿನ ರಜೆಗೆ ಅನುಮೋದನೆಯನ್ನು ನೀಡಿತ್ತು. ಆದರೆ ಕೆಲವೊಂದು ಕಂಪನಿಗಳು ಹಾಗೂ ಸಂಸ್ಥೆಗಳು ಮಹಿಳಾ ಉದ್ಯೋಗಿಗಳಿಗೆ ರಜೆ ನೀಡಲು ಹಿಂದೆಮುಂದೆ ನೋಡುತ್ತಿವೆ. ಹಾಗಾಗಿ ಇದನ್ನು ಸರಿಯಾದ ರೀತಿಯಲ್ಲಿ ಹಾಗೂ ಕಡ್ಡಾಯವಾಗಿ ಜಾರಿಗೆ ತರುವಂತೆ ಆದೇಶವನ್ನು ಹೈಕೋರ್ಟ್​​ ನೀಡಿದೆ.

ನೋಂದಾಯಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ 18ರಿಂದ 52 ವರ್ಷದೊಳಗಿನ ಎಲ್ಲ ಮಹಿಳಾ ನೌಕರರಿಗೆ ಈ ರಜೆ ಅನ್ವಯವಾಗುತ್ತದೆ. ಶಾಶ್ವತ, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ಈ ವಿಸ್ತರಣೆ ಮಾಡಬೇಕು ಎಂದು ಹೇಳಿದೆ. ಕೇವಲ ಸಾಫ್ಟ್‌ವೇರ್ ಅಥವಾ ದೊಡ್ಡ ಕಂಪನಿಗಳಲ್ಲದೆ ಹೋಟೆಲ್ ಕೆಲಸಗಾರರು, ದಿನಗೂಲಿ ನೌಕರರು ಸೇರಿದಂತೆ ಅಸಂಘಟಿತ ವಲಯದ ಮಹಿಳೆಯರಿಗೂ ಈ ಸೌಲಭ್ಯ ತಲುಪುವಂತೆ ಮಾರ್ಗಸೂಚಿಗಳನ್ನು ಹೊರಡಿಸಲು ಸರ್ಕಾರಕ್ಕೆ ಸೂಚಿಸಲಾಗಿದೆ.























































 
 

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ಮಹಿಳೆಯರ ಋತುಸ್ರಾವದ ಆರೋಗ್ಯವು ಸಂವಿಧಾನದ 21ನೇ ವಿಧಿಯಡಿ ಬರುವ ‘ಬದುಕುವ ಹಕ್ಕಿನ’ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ರಜೆಯಲ್ಲ, ಮಹಿಳೆಯರ ಘನತೆಯ ಪ್ರಶ್ನೆ ಎಂದು ಅಭಿಪ್ರಾಯಪಟ್ಟಿದೆ. ಪ್ರಸ್ತುತ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಜೊತೆಗೆ, ಈ ಕುರಿತು ಪ್ರಸ್ತಾವಿತ ‘ಕರ್ನಾಟಕ ಋತುಸ್ರಾವ ರಜೆ ಮತ್ತು ನೈರ್ಮಲ್ಯ ವಿಧೇಯಕ-2025’ ಅನ್ನು ಶೀಘ್ರವಾಗಿ ಕಾನೂನಾಗಿ ರೂಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿಯ ಹೋಟೆಲ್ ನೌಕರರೊಬ್ಬರು ತಮಗೆ ರಜೆ ನೀಡುತ್ತಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಕೆಲವು ಉದ್ಯೋಗದಾತರ ಸಂಘಟನೆಗಳು ಈ ನೀತಿಯನ್ನು ವಿರೋಧಿಸಿದ್ದರೂ, ಮಹಿಳೆಯರ ಜೈವಿಕ ಅಗತ್ಯಗಳನ್ನು ಗೌರವಿಸುವುದು ಸಮಾನತೆಯ ಸಂಕೇತ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

error: Content is protected !!
Scroll to Top