ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ : ಮೇ 29ರಿಂದ ಶಾಲಾರಂಭ

ಈ ಬಾರಿ ಒಟ್ಟು 245 ಶಾಲಾ ಕೆಲಸದ ದಿನಗಳು

ಬೆಂಗಳೂರು: 2026 – 27ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ 29ರಿಂದ ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತರಗತಿಗಳು ಆರಂಭಗೊಳ್ಳಲಿವೆ. ಈ ಬಾರಿ ಒಟ್ಟು 245 ಶಾಲಾ ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದ್ದು, ಅಕ್ಟೋಬರ್‌ 3 ರಿಂದ 21 ರವರೆಗೆ ದಸರಾ ರಜೆ ಹಾಗೂ 2027ರ ಏ.11ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ.

ಶಾಲೆಗಳ ಮೊದಲ ಅವಧಿ ಮೇ 29ರಿಂದ ಅಕ್ಟೋಬರ್‌ 2 ರವರೆಗೆ ಮತ್ತು ಎರಡನೇ ಅವಧಿ ಅಕ್ಟೋಬರ್ 22ರಿಂದ 2027ರ ಏಪ್ರಿಲ್‌ 10 ರವರೆಗೆ ನಡೆಯಲಿದೆ. ಹೀಗಾಗಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಜೂ.30ರ ಒಳಗೆ ಪೂರ್ಣಗೊಳಿಸಬೇಕು. ಶಾಲೆ ಬಿಟ್ಟಿರುವ 6 ವರ್ಷದಿಂದ 18 ವರ್ಷದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ದಾಖಲಾತಿ ಜಾಗೃತಿ ಅಭಿಯಾನ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.























































 
 

2026ರ ಜೂನ್‌ ಮೊದಲ ವಾರದಲ್ಲೇ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆಗೆ ಆದೇಶಿಸಿರುವ ಇಲಾಖೆ ದಾಖಲಾತಿ ಅಭಿಯಾನದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ವಿಶೇಷ ಒತ್ತು ನೀಡಿದೆ.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2026 – 27ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದೆ.

ನೂತನ ಶೈಕ್ಷಣಿಕ ವರ್ಷದ ಒಟ್ಟು 365 ದಿನಗಳಲ್ಲಿ 119 ರಜಾ ದಿನಗಳಿರಲಿದ್ದು, 245 ಕರ್ತವ್ಯದ ದಿನಗಳೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳ ನಿರ್ವಹಣೆಗಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು, ಶಾಲಾ ಸ್ಥಳೀಯ ರಜೆಗೆ 4 ದಿನಗಳು ಮತ್ತು ಕಲಿಕಾ ಪ್ರಕ್ರಿಯೆಗೆ 181 ದಿನಗಳನ್ನು ಮೀಸಲಿಡಲಾಗಿದೆ. ಉಳಿದಂತೆ ದಾಖಲಾತಿ ಆಂದೋಲನ, ಶಾಲಾ ಪ್ರಾರಂಭೋತ್ಸವ ಕುರಿತು ಎಂದಿನಂತೆ ಚಟುವಟಿಕೆಗಳನ್ನು ನಿಗದಿಪಡಿಸಲಾಗಿದೆ.

error: Content is protected !!
Scroll to Top