ಸಮರ ಸಂಧಾನ ಕೆಡಿಸಿದ್ದು ನೆತನ್ಯಾಹು ಫೋನ್‌ ಕರೆ!

ಒಂದು ಫೋನ್‌ ಕರೆಯಿಂದಾಗಿ ಇಡೀ ಮಾತುಕತೆ ವಿಫಲವಾಯಿತು ಎಂದು ದೂರಿದ ಇರಾನ್‌

ಟೆಹ್ರಾನ್‌: ಅಮೆರಿಕ ಮತ್ತು ಇರಾನ್ ನಡುವೆ ಸಂಧಾನವಾಗಿ ಯುದ್ಧ ನಿಂತು ಜಗತ್ತು ಶಾಂತಿಯತ್ತ ಮರಳುತ್ತದೆ ಎಂಬ ನಿರೀಕ್ಷೆ ನಿನ್ನೆ ಹುಸಿಯಾಗಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆ ವಿಫಲವಾಯಿತು.‌ ಈ ಬೆಳವಣಿಯ ಕೆಲ ಗಂಟೆಗಳ ನಂತರ ಇರಾನ್‌ ಮೊದಲ ಪ್ರತಿಕ್ರಿಯೆ ನೀಡಿದ್ದು, ಮಾತುಕತೆ ವಿಫಲವಾಗಲು ಇಸ್ರೇಲ್‌ ಪ್ರಧಾನಿ ಕಾರಣ ಎಂದು ಹೇಳಿದೆ.

ಅಮೆರಿಕ – ಇರಾನ್‌ ಮಾತುಕತೆ ಮಧ್ಯೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ಗೆ ಫೋನ್‌ ಕಾಲ್‌ ಮಾಡಿದ್ದರು. ಆ ಫೋನ್‌ ಕಾಲ್‌ ಬಳಿಕ ಮಾತುಕತೆ ಹಳಿ ತಪ್ಪಿತು, ಅಮೆರಿಕ ಬಿಕ್ಕಟ್ಟಿನಲ್ಲಿ ಕಾಣುತ್ತಿದ್ದ ಪ್ರಗತಿಯನ್ನು ಹಾಳುಮಾಡಿತು ಎಂದು ಇರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.























































 
 

ಯುದ್ಧದ ಮೂಲಕ ಸಾಧಿಸಲು ಸಾಧ್ಯವಾಗದ್ದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಅಮೆರಿಕ ಪ್ರಯತ್ನಿಸಿತ್ತು. ಆದರೆ ಸಭೆ ನಡೆಯುತ್ತಿದ್ದಾಗ ನೆತನ್ಯಾಹು, ವ್ಯಾನ್ಸ್‌ಗೆ ಕರೆ ಮಾಡಿ, ಅಮೆರಿಕ-ಇರಾನ್‌ ಮಾತುಕತೆಗಳಿಂದ ಗಮನವನ್ನು ಇಸ್ರೇಲ್‌ ಹಿತಾಸಕ್ತಿಗಳತ್ತ ಸೆಳೆದರು. ಇದು ಒಪ್ಪಂದವನ್ನು ಹಾಳುಮಾಡಿತು ಎಂದು ದೂರಿದ್ದಾರೆ.

ವ್ಯಾನ್ಸ್‌ ಇಸ್ಲಾಮಾಬಾದ್‌ನಿಂದ ನಿರ್ಗಮಿಸುವುದಕ್ಕೂ ಮುನ್ನ ನಡೆಸಿದ್ದ ಸುದ್ದಿಗೋಷ್ಠಿ ಅನಗತ್ಯವಾಗಿತ್ತು ಎಂದ ಅರಾಘ್ಚಿ, ಇರಾನ್ ತನ್ನ ರಾಷ್ಟ್ರದ ಹಿತಾಸಕ್ತಿ ಮತ್ತು ಸಾರ್ವಭೌಮತ್ವ ಕಾಪಾಡಲು ಸಿದ್ಧ ಮತ್ತು ಬದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಇನ್ನೂ ಸಂಧಾನ ಮಾತುಕತೆ ನಡುವೆ ನೆತನ್ಯಾಹು, ಜೆಡಿ ವ್ಯಾನ್ಸ್‌ಗೆ ಕರೆ ಮಾಡಿ ದಿಕ್ಕು ತಪ್ಪಿಸಿದರು ಅನ್ನೋ ಇರಾನ್‌ ಆರೋಪದವನ್ನ ಅಮೆರಿಕ ಅಲ್ಲಗಳೆದಿಲ್ಲ, ಆದರೆ ಇದು ಸತ್ಯ ಅಂತಲೂ ಒಪ್ಪಿಕೊಂಡಿಲ್ಲ. ತಕ್ಷಣಕ್ಕೆ ಪ್ರತಿಕ್ರಿಯೆ ಕಾಯ್ದಿರಿಸಿದೆ.

ಮಾತುಕತೆ ವಿಫಲವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾರ್ಮುಜ್‌ ಜಲಸಂಧಿಗೆ ದಿಗ್ಭಂಧನ ವಿಧಿಸುವಂತೆ ಯುಎಸ್‌ ನೌಕಾಪಡೆಗೆ ಸೂಚನೆ ನೀಡಿದ್ದಾರೆ. ಇರಾನ್‌ಗೆ ಅಕ್ರಮ ಸುಂಕ ಪಾವತಿಸುವ ಯಾವುದೇ ಹಡಗು ಹಾರ್ಮುಜ್‌ ಜಲಸಂಧಿ ದಾಟಲು ಬಿಡದಂತೆ ಕಟ್ಟಾಜ್ಞೆ ಹೊರಡಿಸಿದ್ದಾರೆ. ಇದು ವಿಶ್ವದಲ್ಲಿ ಮತ್ತೆ ತೈಲ ಬಿಕ್ಕಟ್ಟು ಹೆಚ್ಚಿಸಲು ಕಾರಣವಾಗುವ ಆತಂಕ ಮೂಡಿಸಿದೆ.

error: Content is protected !!
Scroll to Top