ಮದುವೆಯಾದ ಒಂದೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುದೀಪ್ ರೈ
ಬೆಳ್ತಂಗಡಿ : ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಯುವ ಉದ್ಯಮಿ ಬಿ.ಸುದೀಪ್ ರೈ (31) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ಸೌಮ್ಯ ಶೆಟ್ಟಿಯನ್ನು ಕಾರ್ಕಳ ಪೊಲೀಸರು ಶನಿವಾರ ಉಡುಪಿಯಲ್ಲಿ ಬಂಧಿಸಿದ್ದಾರೆ.
ಸುದೀಪ್ ರೈ ಮಾ.17ರಂದು ಕಾರ್ಕಳ ತಾಲೂಕಿನ ಕಜೆ ಎಂಬಲ್ಲಿರುವ ಹೆಂಡತಿಯ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಾ.29 ರಂದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಪತ್ನಿ ಸೌಮ್ಯ ಶೆಟ್ಟಿಯನ್ನು ಕಾರ್ಕಳ ನಗರ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ(28) ಜೊತೆ ಮನೆಮಂದಿಗೆ ಹೇಳದೆ ಫೆ.17ರಂದು ವಿವಾಹ ನೊಂದಣಿ ಮಾಡಿಸಿಕೊಂಡದ್ದರು ಎನ್ನಲಾಗಿದೆ. ನಂತರ ಕಾರ್ಕಳದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಈ ಮದುವೆಗೆ ಸುದೀಪ್ ಮನೆಯವರ ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ.
ಅತ್ಮಹತ್ಯೆ ಮಾಡಿಕೊಂಡ ಸುದೀಪ್ ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ SRN ಗ್ರೂಪ್ ಹೆಸರಿನಲ್ಲಿ ಇಲೆಕ್ಟ್ರಾನಿಕ್ ಹಾಗೂ ಸೋಲಾರ್ ಉದ್ಯಮವನ್ನು ಮಾಡಿಕೊಂಡಿದ್ದರು. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿಯ ತಂದೆ ದಾಮೋದರ ರೈ ನೀಡಿದ ದೂರಿನ ಮೇರೆಗೆ ಸೌಮ್ಯ ಶೆಟ್ಟಿ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

























