ಅಲುಂಬುಂಡ: ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆಯಲಿರುವ ಸಾಪ್ತಾಹಿಕ ಬೇಸಿಗೆ ಶಿಬಿರವನ್ನು ಖ್ಯಾತ ಚಿತ್ರಕಲಾ ಶಿಕ್ಷಕ, ಸಾಹಿತಿ ಮತ್ತು ಕವಿಯೂ ಆಗಿರುವ ಭಾಸ್ಕರ್ ನೆಲ್ಯಾಡಿಯವರು ದೀಪ ಪ್ರಜ್ವಲಿಸಿ, ಭಾರತ ಮಾತೆಗೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು. ಬೇಸಿಗೆ ಶಿಬಿರವು ಬೀಜವನ್ನು ಮೊಳಕೆಯೊಡೆಯಲು ಸಹಕರಿಸುವ ಸಸಿ ಮಾಡಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಾಗ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎಂದು ಅವರು ವಿಶ್ಲೇಷಿಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಶೈಕ್ಷಣಿಕ ಸೇವೆಯ ಜೊತೆಗೆ ವ್ಯಕ್ತಿತ್ವ ವಿಕಸನದ ಪುಣ್ಯಕಾರ್ಯವೂ ನಡೆಯುತ್ತಿರುವುದು ಸ್ತುತ್ಯರ್ಹ ಎಂದರು.

ವಿದ್ಯಾರತ್ನ ಪ್ರಶಸ್ತಿ ವಿಜೇತೆ ದಯಾಮಣಿ ಉಮೇಶ್ ಅವರಿಗೆ ಸನ್ಮಾನ
ರಾಜ್ಯಮಟ್ಟದ ವಿದ್ಯಾರತ್ನ ಪ್ರಶಸ್ತಿ ವಿಜೇತರಾದ ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಉಮೇಶ್ ಮಳುವೇಲು ಅವರಿಗೆ ಎವಿಜಿ ಎಗ್ಸಲೆನ್ಸ್ ಸನ್ಮಾನವನ್ನು ನೀಡಿ ಗೌರವಿಸಲಾಯಿತು. ಪ್ರತಿಕ್ರಿಯಿಸಿ ಮಾತನಾಡಿದ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಶಿಕ್ಷಕರು ಮತ್ತು ಪೋಷಕರ ಜಂಟಿ ಜವಾಬ್ದಾರಿಗಳನ್ನು ನೆನಪಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಶಾಲಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ ಸಾಧನೆ, ಪ್ರತಿಭೆಗಳಿಗೆ ಪ್ರತಿಯಾಗಿ ಪ್ರಶಸ್ತಿಗಳು ಬಂದೇ ಬರುತ್ತವೆ. ಅವುಗಳನ್ನು ಗುರುತಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು. ಹಿರಿಯರಾದ ನಾವು ಮಕ್ಕಳನ್ನು ಸಹಜವಾಗಿ ಬೆಳೆಯಲು ಬಿಟ್ಟು ಅವರು ದಾರಿ ತಪ್ಪಿದಾಗ ಸರಿಪಡಿಸಬೇಕು ಎಂದು ಕರೆಕೊಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಸಂಚಾಲಕ ಎ.ವಿ. ನಾರಾಯಣರವರು ಶಿಬಿರದ ಆಶಯಗಳನ್ನು ತೆರೆದಿಟ್ಟರು.
ಶಾಲಾ ನಿರ್ದೇಶಕ ಎ.ವಿ. ಗಂಗಾಧರ, ಉಪಾಧ್ಯಕ್ಷ ಉಮೇಶ್ ಮಳುವೇಲು, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಾಶ್ರೀ ಹೆಗ್ಡೆ , ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಮತ್ತು ಮುಖ್ಯೋಪಾಧ್ಯಾಯ ಅಮರನಾಥ್ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಶ್ವೇತಾ ಪ್ರಾರ್ಥನೆ, ಅನುರಾಧಾ ಸ್ವಾಗತ ಮತ್ತು ಹರ್ಷಿತಾ ಸನ್ಮಾನಿತರ ಪರಿಚಯಗಳನ್ನು ನೆರವೇರಿಸಿದರು. ಶಿಕ್ಷಕಿ ಸುಚಿತಾ ಕಾರ್ಯಕ್ರಮವನ್ನು ನಿರೂಪಿಸಿ ರೀಮಾ ಲೋಬೊ ವಂದನಾರ್ಪಣೆಗೈದರು.

























