ಸರ್ಕಾರಿ ಆದೇಶ ಲಗತ್ತಿಸದಿರುವುದಕ್ಕೆ ಅರ್ಜಿದಾರರಿಗೆ 1 ಲಕ್ಷ ರೂ. ದಂಡ
ಬೆಂಗಳೂರು : ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದವರಿಗೆ ಹಿನ್ನಡೆಯಾಗಿದೆ. ಬೆಂಗಳೂರಿನ ಎಚ್.ಎನ್. ಚಂದನಾ ಮತ್ತು ಎಸ್.ವೆಂಕಟೇಶ್ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪರೀಕ್ಷೆಯ ಕೊನೆಯ ಹಂತದಲ್ಲಿ ಸರ್ಕಾರದ ತೆಗೆದುಕೊಂಡಿರುವ ಈ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಲಾಗಿತ್ತು. ಆದರೆ ಅರ್ಜಿದಾರರಿಗೆ ಹೈಕೋರ್ಟ್ ಈಗ ಬಿಗ್ ಶಾಕ್ ಕೊಟ್ಟಿದೆ.
ಪಿಐಎಲ್ ಸಲ್ಲಿಕೆ ಮಾಡಿರುವವರು ಸರ್ಕಾರದ ಆದೇಶದ ವಿವರ ಒದಗಿಸದೆ ಕೇವಲ ಪತ್ರಿಕೆ ವರದಿ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಅರ್ಜಿದಾರರಾದ ಎಚ್.ಎನ್.ಚಂದನಾ ಮತ್ತು ಎಸ್.ವೆಂಕಟೇಶ್ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿರುವ ಹೈಕೋರ್ಟ್ ಪಿಐಎಲ್ ವಜಾಗೊಳಿಸಿ ಆದೇಶಿಸಿದೆ. ಆ ಮೂಲಕ ಅರ್ಜಿದಾರರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.
ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗಳ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕನ್ನಡಪರ ಸಂಘಟನೆಗಳು ಸ್ವಾಗತಿಸಿದ್ದವಾದರೂ, ಬಿಜೆಪಿಯ ಕೆಲವು ನಾಯಕರು ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿಚಾರವಾಗಿ ಸ್ವತಃ ಮಧ್ಯಪ್ರವೇಶ ಮಾಡಿದ್ದ ರಾಜ್ಯಪಾಲರು ಸರ್ಕಾರದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿ ಶಾಲನೀಶ್ಗೆ ಪತ್ರ ಕೂಡ ಬರೆದಿದ್ದರು.
ಗವರ್ನರ್ ಈ ನಡೆ ವಿರುದ್ಧ ಸಿಡಿದೆದ್ದಿದ್ದ ಕರವೇ ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಈ ರೀತಿ ಮಾಡೋದು ತಪ್ಪು. ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ ಎಂದು ವಾಗ್ದಾಳಿ ನಡೆಸಿತ್ತು.

























