ಚುನಾವಣಾ ಭಾಷಣದಲ್ಲಿ RSS ವಿರುದ್ಧ ನಾಲಿಗೆ ಹರಿಯಬಿಟ್ಟ ಮಲ್ಲಿಕಾರ್ಜುನ ಖರ್ಗೆ: ದೂರು ದಾಖಲು

ಗುವಾಹಟಿ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ವಿಷಕಾರಿ ಹಾವುಗಳಿಗೆ ಹೋಲಿಕೆ ಮಾಡಿದ್ದು, ಅವರ ವಿರುದ್ಧ ಅಸ್ಸಾಂ‌ನ ಎರಡು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.

ದಕ್ಷಿಣ ಅಸ್ಸಾಂನ ಶ್ರೀಭೂಮಿ ಜಿಲ್ಲೆಯ ಕರೀಂಗಂಜ್ ದಕ್ಷಿಣ ವಿಧಾನಸಭಾ ಕ್ಷೇತ್ರದ ನೀಲಂಬಜಾರ್‌ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಖರ್ಗೆ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿರುವುದಾಗಿ ಆರ್‌ಎಸ್‌ಎಸ್ ಆರೋಪಿಸಿದೆ.

‘ನಮಾಜ್ ಮಾಡುವಾಗ ನಿಮ್ಮ ಮುಂದೆ ವಿಷಕಾರಿ ಹಾವು ಬಂದರೆ, ನೀವು ಪ್ರಾರ್ಥನೆಯನ್ನು ನಿಲ್ಲಿಸಿ ಮೊದಲು ಆ ಹಾವನ್ನು ಕೊಲ್ಲಬೇಕು ಎಂದು ಕುರಾನ್ ಹೇಳುತ್ತದೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕೂಡ ಅದೇ ವಿಷಕಾರಿ ಹಾವಿನಂತೆ’ ಎಂದು ಖರ್ಗೆ ಹೇಳಿದ್ದಾಗಿ ದೂರಿನಲ್ಲಿ ‌ತಿಳಿಸಲಾಗಿದೆ.























































 
 

ಖರ್ಗೆ ಅವರ ಈ ಹೇಳಿಕೆಯು ಪ್ರಚೋದನಾಕಾರಿ ಮತ್ತು ಕೋಮು ಸೂಕ್ಷ್ಮತೆಯಿಂದ ಕೂಡಿದೆ ಎಂದು ಸಂಘಟನೆಯ ವಕ್ತಾರರು ತಿಳಿಸಿದ್ದಾರೆ. ಈ ರೀತಿಯ ಹೇಳಿಕೆಗಳು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ದೈಹಿಕ ಹಲ್ಲೆ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಿದೆ ಎಂದು ದೂರಿನಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಇದು 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 83ರ ಅಡಿಯಲ್ಲಿ ‘ಭ್ರಷ್ಟ ಚುನಾವಣಾ ಅಭ್ಯಾಸ’ವಾಗಿದ್ದು, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಪ್ರಯತ್ನ ಎಂದು ಆರ್‌ಎಸ್‌ಎಸ್ ಆರೋಪಿಸಿದೆ.

ಈ ಘಟನೆಗೆ ಸಂಬಂಧಿಸಿದ ಹಾಗೆ ಆರ್‌ಎಸ್‌ಎಸ್‌ನ ಉತ್ತರ ಅಸ್ಸಾಂ ಕಾರ್ಯದರ್ಶಿ ಖಗೇನ್ ಸೈಕಿಯಾ ಅವರು ದಿಸ್‌ಪುರ ಪೊಲೀಸ್ ಠಾಣೆಯಲ್ಲಿ ಮತ್ತು ದಕ್ಷಿಣ ಅಸ್ಸಾಂ ಕಾರ್ಯದರ್ಶಿ ಜ್ಯೋತ್ಸಾಮೋಯ್ ಚಕ್ರವರ್ತಿ ಅವರು ಸಿಲ್ಟಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರುಗಳನ್ನು ನೀಡಿದ್ದಾರೆ. ಈ ನಡುವೆ ಬಿಜೆಪಿ ಕೂಡ ಬಸಿಷ್ಠ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದರ ಜೊತೆಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದೆ.

ಚುನಾವಣಾ ಸಂದರ್ಭದಲ್ಲಿ ನೀಡಿರುವ ಈ ಹೇಳಿಕೆಯು ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಬಿತ್ತಲು ಮತ್ತು ಚುನಾವಣಾ ವಾತಾವರಣವನ್ನು ಕೆಡಿಸಲು ಮಾಡಿದ ಪ್ರಯತ್ನ ಎಂದು ಸಂಘಟನೆ ಹೇಳಿದೆ.

error: Content is protected !!
Scroll to Top