ಇಂಧನ ಬೆಲೆ ಕಡಿಮೆಯಾಗುವ ನಿರೀಕ್ಷೆ
ಲಂಡನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗೆ 14 ದಿನಗಳ ಕದನ ವಿರಾಮವನ್ನು ಘೋಷಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಭಾರಿ ಕುಸಿತವಾಗಿದೆ.
ಕದನ ವಿರಾಮದ ಸುದ್ದಿಯಿಂದಾಗಿ ಕಚ್ಚಾತೈಲದ ಬೆಲೆಗಳು ಒಂದೇ ದಿನದಲ್ಲಿ ಸುಮಾರು 13%ರಿಂದ 17% ರಷ್ಟು ಕುಸಿದಿವೆ. ಇದು ಕಳೆದ ಆರು ವರ್ಷಗಳಲ್ಲೇ ಒಂದೇ ದಿನ ಕಂಡ ಅತಿ ದೊಡ್ಡ ಕುಸಿತ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾತೈಲದ ಬೆಲೆ ಸುಮಾರು 16.13 ಡಾಲರ್ (14.3%) ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 96.82 ಡಾಲರ್(8,940 ರೂ.) ತಲುಪಿದೆ. ಜಾಗತಿಕ ಮಾನದಂಡವಾದ ಒಪೆಕ್ ದೇಶಗಳ ಬ್ರೆಂಟ್ ಕಚ್ಚಾತೈಲದ ದರ 14.84 ಡಾಲರ್ (13.6%) ನಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 94.43 ಡಾಲರ್‌ಗೆ(8,720 ರೂ.) ಇಳಿಕೆಯಾಗಿದೆ. ಈ ಘೋಷಣೆಗೂ ಮುನ್ನ ಯುದ್ಧದ ಭೀತಿಯಿಂದಾಗಿ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 117 – 120 ಡಾಲರ್‌ವರೆಗೂ (11 ಸಾವಿರ ರೂ.ವರೆಗೆ) ಏರಿಕೆಯಾಗಿತ್ತು.
ಇರಾನ್ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಲು ಇರಾನ್ ಒಪ್ಪಿಗೆ ನೀಡಿದ್ದರಿಂದ ಮಾರುಕಟ್ಟೆಯಲ್ಲಿನ ಆತಂಕವನ್ನು ಕಡಿಮೆ ಮಾಡಿದೆ. ಜಗತ್ತಿನ ಸುಮಾರು 20% ತೈಲ ಪೂರೈಕೆ ಈ ಮಾರ್ಗದ ಮೂಲಕವೇ ನಡೆಯುವುದರಿಂದ ಪೂರೈಕೆ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ.
ಇರಾನ್‌ನಲ್ಲಿ ಸಂಭ್ರಮಾಚರಣೆ
ಅಮೆರಿಕ ಹಾಗೂ ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇರಾನ್ ಜನತೆ ರಾಷ್ಟ್ರಧ್ವಜ ಹಿಡಿದು ವಿಜಯೋತ್ಸವ ಆಚರಣೆ ಮಾಡಿದ್ದಾರೆ. ಟೆಹ್ರಾನ್‌ನ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಆಚರಿಸಲಾಗಿದೆ. ಜೀವ್ಸ್ ಹಾಗೂ ಅಮೆರಿಕನ್ನರ ಮೇಲೆ ನಮ್ಮ ಗೆಲುವಾಗಿದೆ ಎಂದು ಘೋಷಣೆ ಕೂಗುತ್ತಾ ಸಂಭ್ರಮಾಚರಣೆ ಮಾಡಿದ್ದಾರೆ. ಇರಾನ್ ರಾಷ್ಟ್ರಧ್ವಜಗಳನ್ನು ಕೈಯಲ್ಲಿ ಹಿಡಿದು ಘೋಷಣೆ ಕೂಗಲಾಗಿದೆ. ಇರಾಕ್‌ನ ಬಾಗ್ದಾದ್‌ನಲ್ಲಿಯೂ ಕೂಡ ಸಂಭ್ರಮಾಚರಣೆ ಜೋರಾಗಿದೆ.

























