ಪುತ್ತೂರು: ಈಶ್ವರಮಂಗಲದ ಹನುಮಗಿರಿಯಲ್ಲಿರುವ ತೋದಂಡರಾಮ, ಪಂಚಮುಖಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಎ. 9-12 ರ ವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ಅಂತಿಮ ಘಟ್ಟಕ್ಕೆ ತಲುಪಿರುವುದಾಗಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ಎ. 10 ರಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸಲಿದ್ದಾರೆ. ನೂತನ ಗೋಪುರ ಅವರಿಂದ ಲೋಕಾರ್ಪಣೆಯಾಗಲಿದೆ ಎಂದು ಹೇಳಿದ್ದಾರೆ.
ಆಯೋಧ್ಯೆಯಿಂದ ತಂದ ರಾಮ ಜ್ಯೋತಿ ಮತ್ತು ಅಂಜನಾದ್ರಿಯಿಂದ ತಂದ ಹನುಮ ಜ್ಯೋತಿ ಪುತ್ತೂರು, ಸುಳ್ಯ ಹಾಗೂ ಕಾಸರಗೋಡಿನ ಒಟ್ಟು 60 ಗ್ರಾಮಗಳಿಗೆ ತೆರಳಿ ಪರ್ಯಾಟನೆ ಮಾಡುತ್ತಿದ್ದು ಏಪ್ರಿಲ್ 9 ರಂದು ಸಂಜೆ 3ಕ್ಕೆ ಹನುಮಗಿರಿ ಪ್ರವೇಶಿಸಲಿದೆ. ಈಶ್ವರಮಂಗಲ ಪಂಚಲಿಂಗೇಶ್ವರ ದೇವಳದಿಂದ ಹನುಮಗಿರಿ ತನಕ ಅದ್ದೂರಿ ರಥಯಾತ್ರೆ ಮೆರವಣಿಗೆ ನಡೆಯಲಿರುವುದಾಗಿ ಅವರು ಮಾಹಿತಿ ನೀಡಿದ್ದರು.
ಎ. 10 ರಂದು ಅಷ್ಟೋತ್ತರ ಶತನಾರಿಕೇಳ ಯಾಗ ನಡೆಯಲಿದ್ದು, ಇದರಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತರಿರುವರು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯಾಗ ಶಾಲೆಯನ್ನು ಉದ್ಘಾಟಿಸಲಿದ್ದಾರೆ.
ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ:
ಎ. 11 ರಂದು 10 ಕುಂಡಗಳಲ್ಲಿ ಶ್ರೀರಾಮ ತಾರಕ ಯಾಗ ನಡೆಯಲಿದೆ. ಏಪ್ರಿಲ್ 12 ರಂದು ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರ ಪ್ರತಿಷ್ಠಾಪನೆ, ಪರಿವಾರ ದೇವರ ಪ್ರತಿಷ್ಠಾಪನೆ. ಮತ್ತು ಬ್ರಹ್ಮಕಲಶಾಭಿಷೇಕ ಜರುಗಲಿದೆ. ರಾತ್ರಿ ದೇವರ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆಯೊಂದಿಗೆ ಬ್ರಹ್ಮಕಲಶ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಕಾರ್ಯಕ್ರಮದಲ್ಲಿ ಕಂಚಿಕಾಮಕೋಟಿ ಶ್ರೀಗಳು, ಸುಬ್ರಹ್ಮಣ್ಯ, ಎಡನೀರು, ಒಡಿಯೂರು, ಕನ್ಯಾನ ಶ್ರೀಗಳು ಸೇರಿದಂತೆ ಹಲವು ಪೀಠಾಧಿಪತಿಗಳು. ಸಾಧು ಸಂತರು, ಮಠಾಧೀಶರು, ರಾಜವಂಸಸ್ಥರು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಜನೆ ನಡೆಯಲಿವೆ. ಎ. 12 ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಲಿದೆ ಎಂದು ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಟಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಸ್ವಾಗತ ಸಮಿತಿ ಅಧ್ಯಕ್ಷ ರವೀಶ್ ಪಡುಮಲೆ, ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ. ಮುರಳೀಕೃಷ್ಣ ಹಸಂತಡ್ಕ. ಬೂಡಿಯಾರ್ ರಾಧಾಕೃಷ್ಣ ರೈ, ರವಿಕಿರಣ್ ಶೆಟ್ಟಿ. ಶಶಿಕುಮಾರ್ ರೈ ಬಾಲ್ಯೊಟ್ಟು. ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಪ್ರಧಾನ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ, ನಹುಷ ಪಳನೀರು ಉಪಸ್ಥಿತರಿದ್ದರು.

























