ಪುತ್ತೂರಿನಲ್ಲಿ ʼಮಕ್ಕಳ ಕಲರವʼ ಉಚಿತ ಸಂಸ್ಕಾರ ಬೇಸಿಗೆ ಶಿಬಿರ

ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳಿಗೆ ನೀರುಣಿಸಲು ಮಕ್ಕಳಿಗೆ ಗಣೇಶ ಭಟ್ ಕೇರ ಖಂಡಿಗ ಕರೆ

ಪುತ್ತೂರು: ಮಕ್ಕಳು ತಮ್ಮ ಪೋಷಕರೊಂದಿಗೆ ಹಸಿದ ಬೀದಿನಾಯಿಗಳಿಗೆ ಹಾಗೂ ಇನ್ನಿತರ ಅಶಕ್ತ ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸಿ ಪ್ರಾಣಿ ದಯೆ ತೋರಬೇಕೆಂದು ಗಣೇಶ ಭಟ್ ಕೇರ ಖಂಡಿಗ ಹೇಳಿದರು.

ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರಿನ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ವತಿಯಿಂದ ಪಾಂಗಳಾಯಿ ಅರಸು ಮುಂಡಿತ್ತಾಯ ದೈವಸ್ಥಾನದ ವಠಾರದಲ್ಲಿ ನಡೆದ ಮೊದಲ ದಿನದ ‘ಮಕ್ಕಳ ಕಲರವ’ ಬೇಸಿಗೆ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ನೂರಾರು ಬೀದಿಶ್ವಾನಗಳಿಗೆ ಪ್ರತಿದಿನ ಸ್ವಂತ ಖರ್ಚಿನಲ್ಲಿ ಆಹಾರವನ್ನು ನೀಡುತ್ತಿರುವುದು ಮಾತ್ರವಲ್ಲದೆ, ಸಕಾಲದಲ್ಲಿ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.























































 
 

ಅಧ್ಯಕ್ಷತೆ ವಹಿಸಿದ ದೇವಾಲಯ ಸಂವರ್ಧನಾ ಸಮಿತಿಯ ಜಿಲ್ಲಾಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಧಾರ್ಮಿಕ ಶಿಕ್ಷಣ ತರಗತಿಗಳು ಪ್ರಾರಂಭವಾದ ಬಗೆ ಹಾಗೂ ಅದು ಈವರೆಗೆ ನಡೆದು ಬಂದ ದಾರಿಯನ್ನು ವಿವರಿಸಿ ಶಿಬಿರಾರ್ಥಿಗಳಿಗೆ ಶುಭ ಕೋರಿದರು.

ಮಕ್ಕಳಾದ ಗರಿಮಾ ಮತ್ತು ತಂಡದವರು ಪ್ರಾರ್ಥಿಸಿದರು. ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಶ್ಮಿ ಉದ್ಘಾಟಕರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು.

ಪಾಂಗಳಾಯಿ ದೈವಸ್ಥಾನದ ಅಧ್ಯಕ್ಷ ಗೋಪಾಲ ನಾಯಕ್ ಶುಭ ಹಾರೈಸಿದರು. ಗಣೇಶ ಭಟ್ ಅವರ ಪತ್ನಿ ಪ್ರೀತಿ ಸುಧಾ ಉಪಸ್ಥಿತರಿದ್ದರು. ಹಿಂದೂ ಧಾರ್ಮಿಕ ಶಿಕ್ಷಣದ ಪುಸ್ತಕ ಸಮಿತಿಯ ನಿರ್ವಾಹಕಿ ಶಂಕರಿ ಶರ್ಮ ವಂದಿಸಿದರು. ಪುತ್ತೂರು ನಗರಸಭೆಯ ಮಾಜಿ ಉಪಾಧ್ಯಕ್ಷ ವಿನಯ ಭಂಡಾರಿ ಹಾಗೂ ದೈವಸ್ಥಾನದ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಬೋಧಕರಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಡಾ.ವಿಜಯ ಸರಸ್ವತಿ, ಪ್ರಭಾವತಿ, ಸುಧಾ ಹೆಬ್ಬಾರ್, ಶಂಕರಿ ಶರ್ಮ ಹಾಗೂ ನಿರ್ವಾಹಕರಾಗಿ ಪ್ರತಿಮಾ ಸಂಪತ್, ಉಮಾನಾಥ್ ಮತ್ತು ವಿನುತ, ಕ್ಷಮಾ ಸಂತೋಷ್ ಮುಂತಾದವರು ಸಹಕರಿಸಿದರು. ಮಾವಿನ ಎಲೆಯಿಂದ ವಿಶೇಷ ತೋರಣ, ಮಕ್ಕಳಿಂದ ಸರಳವಾಗಿ ಗಣಪತಿ ಪೂಜೆ, ದಿನನಿತ್ಯ ಪಠಿಸುವ ಶ್ಲೋಕಗಳು, ಆಟ ಇತ್ಯಾದಿಗಳನ್ನು ಎಲ್ಲರೂ ಸೇರಿ ನಡೆಸಿಕೊಟ್ಟರು. ಸುಮಾರು 185 ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡ ಶಿಬಿರ ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ.

error: Content is protected !!
Scroll to Top