ಉಪ್ಪಿನಂಗಡಿ : ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಹಿರಿಯ ಸದಸ್ಯರಾಗಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದ ಶ್ರೀ ಕುಶಾಲಪ್ಪ ಗೌಡ (78) ಇವರು ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 31.03.2026ರಂದು ಉಪ್ಪಿನಂಗಡಿ ಕಟ್ಟೆಚಾರು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಇವರು ಉಪ್ಪಿನಂಗಡಿಯ ಶ್ರೀ ಗಣೇಶ ಸ್ಟೋರ್ ಜವಳಿ ಮಳಿಗೆಯಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿದ್ದು, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘದ ಹಿರಿಯ ಸದಸ್ಯರಾಗಿದ್ದ ಇವರು ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಸಂಘದೊಂದಿಗೆ ಸಕ್ರಿಯರಾಗಿದ್ದರು.
ರಾವಣ, ಇಂದ್ರಜಿತು, ವಾಲಿ,ಸುಗ್ರೀವ,ಮಾಗಧ ,ಕೌರವ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರಲ್ಲದೆ ಪ್ರಸಂಗದ ಯಾವುದೇ ಪಾತ್ರಗಳನ್ನು ಸಮಯೋಚಿತವಾಗಿ ಮಾಡಬಲ್ಲ ಸಮರ್ಥರಾಗಿದ್ದರು.
ಇವರ ನಿಧನಕ್ಕೆ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಇವರು ಪತ್ನಿ ವಾರಿಜ, ಮೂರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ .

























