‘ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಬಳಸಿದ ಎರಡು ಹಾಡುಗಳು
ಬೆಂಗಳೂರು: ಕನ್ನಡದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆಯಾದ ‘ಪರಂವಾ ಸ್ಟುಡಿಯೋಸ್’ಗೆ ದೆಹಲಿ ಹೈಕೋರ್ಟ್ ದೊಡ್ಡ ಮೊತ್ತದ ದಂಡ ವಿಧಿಸಿದೆ. ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 25 ಲಕ್ಷ ರೂಪಾಯಿ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.
ಖ್ಯಾತ ಮ್ಯೂಸಿಕ್ ಕಂಪನಿ ‘ಎಂಆರ್‌ಟಿ ಮ್ಯೂಸಿಕ್’ ಈ ದೂರು ದಾಖಲಿಸಿತ್ತು. 2020ರ ಹಕ್ಕುಸ್ವಾಮ್ಯ ಒಪ್ಪಂದದ ಪ್ರಕಾರ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಎರಡು ಹಾಡುಗಳ ಮಾಲೀಕತ್ವ ತಮ್ಮದಾಗಿದೆ ಎಂದು ಸಂಸ್ಥೆ ವಾದಿಸಿತ್ತು. ಆದರೆ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಈ ಹಾಡುಗಳನ್ನು ಅನುಮತಿ ಪಡೆಯದೆ ಬಳಸಿಕೊಳ್ಳಲಾಗಿತ್ತು ಎಂದು ಎಂಆರ್‌ಟಿ ಮ್ಯೂಸಿಕ್ ಆರೋಪಿಸಿತ್ತು.
ವಿಚಾರಣೆ ವೇಳೆ ರಕ್ಷಿತ್ ಶೆಟ್ಟಿ ಮತ್ತು ತಂಡ ಸಮರ್ಥನೆಯಾಗಿ ಕೆಲವು ವಾದಗಳನ್ನು ಮಂಡಿಸಿತ್ತು. ‘ನ್ಯಾಯ ಎಲ್ಲಿದೆ’ ಹಾಡನ್ನು ಕೇವಲ 7 ಸೆಕೆಂಡ್ ಮತ್ತು ‘ಒಮ್ಮೆ ನಿನ್ನನ್ನು’ ಹಾಡನ್ನು 31 ಸೆಕೆಂಡ್ ಮಾತ್ರ ಬಳಸಲಾಗಿದೆ. ಇದು ಅತಿ ಕಡಿಮೆ ಅವಧಿ ಆಗಿರುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯಾಗುವುದಿಲ್ಲ ಎಂದು ವಾದಿಸಲಾಗಿತ್ತು.
ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಹಾಡುಗಳ ಬಳಕೆಯು ಕೇವಲ ಕಾಕತಾಳೀಯವಲ್ಲ. ಬದಲಾಗಿ ಸಿನಿಮಾದ ಕಥೆಯ ನಿರೂಪಣೆಗೆ ಪೂರಕವಾಗಿ ಮತ್ತು ವಾಣಿಜ್ಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಳಸಲಾಗಿದೆ ಎಂದು ಅಭಿಪ್ರಾಯಪಟ್ಟಿತು. ನಾಯಕ ಸಂಕಷ್ಟದಲ್ಲಿರುವಾಗ ‘ನ್ಯಾಯ ಎಲ್ಲಿದೆ’ ಹಾಡನ್ನು ಹಿನ್ನೆಲೆಯಲ್ಲಿ ಹಾಕಿರುವುದು ಒಂದು ಸೃಜನಾತ್ಮಕ ನಿರ್ಧಾರವಾಗಿದ್ದು, ಇದು ಹಕ್ಕುಸ್ವಾಮ್ಯದ ಅಡಿ ಬರುತ್ತದೆ ಎಂದು ಕೋರ್ಟ್ ಹೇಳಿದೆ.
ನ್ಯಾಯಾಲಯ ರಕ್ಷಿತ್ ಶೆಟ್ಟಿ ಅವರಿಗೆ ಜೈಲು ಶಿಕ್ಷೆ ವಿಧಿಸುವುದರಿಂದ ವಿನಾಯಿತಿ ನೀಡಿದೆಯಾದರೂ, ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದೆ. ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಈಗಾಗಲೇ ಠೇವಣಿ ಇರಿಸಲಾಗಿರುವ 20 ಲಕ್ಷ ರೂಪಾಯಿಗಳನ್ನು ಎಂಆರ್‌ಟಿ ಮ್ಯೂಸಿಕ್‌ಗೆ ನೀಡಲು ಸೂಚಿಸಿದೆ. ನ್ಯಾಯಾಲಯದ ಆದೇಶವನ್ನು ಸಮಯಕ್ಕೆ ಸರಿಯಾಗಿ ಪಾಲಿಸದ ಕಾರಣಕ್ಕೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

























