ಸುಳ್ಯದಲ್ಲಿ ವಿದ್ಯುತ್ ಇಲ್ಲದ ವಿಚಾರವಾಗಿ ಗಲಾಟೆ
ಸುಳ್ಯ: ಮೆಸ್ಕಾಂ ಕಚೇರಿಯಲ್ಲಿ ಗ್ರಾಹಕರು ಮತ್ತು ಮೆಸ್ಕಾಂ ಎಇ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಬಗ್ಗೆ ಇತ್ತಂಡಗಳಿಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮೆಸ್ಕಾಂ ಎಇ ಸುಪ್ರೀತ್ ಹಲ್ಲೆ ಮಾಡಿದ್ದಾರೆ ಎಂದು ಗ್ರಾಹಕ ಅಂಬಟಡ್ಕ ನಿವಾಸಿ ಕುಲ್‍ದೀಪ್ ನೀಡಿರುವ ದೂರಿನಲ್ಲಿ ಮಾ.28ರಂದು ಸಂಜೆಯಿಂದ ರವಿವಾರದವರೆಗೆ ಅಂಬೇಟಡ್ಕ ಪ್ರದೇಶದಲ್ಲಿ ವಿದ್ಯುತ್ ಇಲ್ಲದೆ ಇದ್ದುದರಿಂದ ನೆರೆಮನೆಯ ಸಂದೀಪ್ ಅವರ ಜತೆ ಸುಳ್ಯದ ಕೇರ್ಪಳದಲ್ಲಿರುವ ಮೆಸ್ಕಾಂ ಕಚೇರಿಯ ಬಳಿಗೆ ಹೋಗಿ, ಕಚೇರಿಯ ಹೊರ ಬಾಗದಲ್ಲಿ ನಿಂತಿದ್ದ ಮೆಸ್ಕಾಂ ಸಹಾಯಕ ಇಂಜಿನಿಯರ್ ಸುಪ್ರೀತ್ ಅವರಲ್ಲಿ ನಮ್ಮ ವಠಾರದಲ್ಲಿ ನಿನ್ನೆಯಿಂದ ಕರೆಂಟ್ ಇಲ್ಲ ಯಾವಾಗ ಕರೆಂಟ್ ಬರುತ್ತದೆಂದು ಕೇಳಿದ್ದರು.
ಆ ಸಮಯ ಸುಪ್ರೀತ್ ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ನನ್ನ ಕುತ್ತಿಗೆಯ ಮೇಲೆ ಕೈ ಹಾಕಿ ದೂಡಿ ಹಾಕಿ ಗಾಯಗೊಳಿಸಿದ್ದು ಈ ಸಮಯ ದಲ್ಲಿ ತಡೆಯಲು ಬಂದ ಸಂದೀಪ್ ಅವರನ್ನು ಕೂಡ ನೆಲಕ್ಕೆ ದೂಡಿ ಹಲ್ಲೆ ನಡೆಸಿದ್ದಾರೆ. ನಮ್ಮ ಕೈಯಲ್ಲಿದ್ದ ನಮ್ಮ ಬೈಕಿನ ಕೀಯನ್ನು ಕಿತ್ತುಕೊಂಡು ದೂರಕ್ಕೆ ಎಸೆದಿದ್ದು ಬಳಿಕ ಬೈಕಿನ ಪೆಟ್ರೋಲ್ ಟ್ಯಾಂಕಿನ ಕೆಳಭಾಗದ ಪೈಪನ್ನು ಚಾಕುವಿನಿಂದ ತುಂಡು ಮಾಡಿದ್ದಾರೆ. ಬಳಿಕ ನಾವು ಸುಳ್ಯ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದಿದ್ದೇವೆ. ಗ್ರಾಹಕರೊಂದಿಗೆ ಅವಾಚ್ಯವಾಗಿ ನಡೆಯುತ್ತಿರುವ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಮೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಸುಪ್ರೀತ್ ಕೂಡ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ರವಿವಾರ ಸುಳ್ಯ ಕಸಬಾ ಗ್ರಾಮದ ಕೇರ್ಪಳದಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯದಲ್ಲಿರುವ ಸಮಯ ಕುಲದೀಪ್ ಎಂಬವರು ವಿದ್ಯುತ್ ಬಗ್ಗೆ ಚರ್ಚೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ದೈಹಿಕ ಹಲ್ಲೆ ಮಾಡಿದ್ದಾರೆ.
ಈ ವೇಳೆ ನಾನು ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದು ನಂತರ ಕುಲದೀಪ್ ಅವರು ಆತನ ಸ್ನೇಹಿತ ಸಂದೀಪನಿಗೆ ಕರೆ ಮಾಡಿ ಕಚೇರಿಗೆ ಬರಲು ಹೇಳಿದ್ದಾರೆ. ಅಲ್ಲಿಗೆ ಬಂದ ಸಂದೀಪನು ದಾರಿ ಬದಿಯಲ್ಲಿ ಬಿದ್ದಿರುವ ಕಲ್ಲಿನಿಂದ ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದು, ಸರ್ಕಾರಿ ಕರ್ತವ್ಯದಲ್ಲಿರುವ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ. ಬಳಿಕ ನಾನು ಸುಳ್ಯ ಸರಕಾರಿ ಆಸ್ವತ್ರೆಗೆ ಹೋಗಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ದೂರನ್ನು ನೀಡಲಾಗಿದೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸುಳ್ಯ ಪೊಲೀಸರು ಇತ್ತಂಡಗಳಿಂದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

























