ಪ್ರೀತಿಸಿ ಮದುವೆಯಾಗಿದ್ದ ಯುವ ಉದ್ಯಮಿಯ ಬದುಕು ಒಂದೇ ತಿಂಗಳಲ್ಲಿ ದುರಂತ ಅಂತ್ಯ
ಕಾರ್ಕಳ : ಒಂದು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವ ಉದ್ಯಮಿ ಕಾರ್ಕಳದಲ್ಲಿರುವ ಪತ್ನಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಮಾ.17ರಂದು ತಿಂಡಿಯ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೊರಟದಲ್ಲಿದ್ದವರು ಚಿಕಿತ್ಸೆ ಫಲಿಸದೆ ಮಾ.29ರಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ಅಜ್ಜನ ಮನೆಯಲ್ಲಿ ವಾಸವಾಗಿದ್ದ ಮೂಲತಃ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಬಿ.ಸುದೀಪ್ ರೈ (36) ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ(28) ಜೊತೆ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಪುತ್ತೂರು ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ಮನೆೈವರಿಗೆ ಹೇಳದೆ ಫೆ.17ರಂದು ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಕಾರ್ಕಳ ಬಂಗ್ಲೆಗುಡ್ಡೆಯ ಕಜೆ ಎಂಬಲ್ಲಿರುವ ಪತ್ನಿ ಮನೆಯಲ್ಲಿ ಒಂದು ತಿಂಗಳಿಂದ ಇದ್ದರು.
ಸುದೀಪ್ ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ SRN ಗ್ರೂಪ್ ಹೆಸರಿನಲ್ಲಿ ಇಲೆಕ್ಟ್ರಾನಿಕ್ ಹಾಗೂ ಸೋಲಾರ್ ಉದ್ಯಮವನ್ನು ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆಯಿಂದ ಕಾರಣ ಬಯಲಾಗಬೇಕಿದೆ.

























