ಮತ್ತೆ ವಕ್ಕರಿಸಿದ ಕೊರೋನಾ : ಅಮೆರಿಕದಲ್ಲಿ ರೂಪಾಂತರಿ ವೈರಸ್‌ ಹಾವಳಿ

25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ಹೊಸ ರೂಪಾಂತರಿ ತಳಿಯ ಕಾಟ

ವಾಷಿಂಗ್ಟನ್‌ : ಜಗತ್ತಿನಾದ್ಯಂತ ಕೊರೋನಾ ಮತ್ತೆ ಆತಂಕ ಸೃಷ್ಟಿಸಿದೆ. ಅಮೆರಿಕದಲ್ಲಿ ಕೋವಿಡ್-19‌ ಹೊಸ ರೂಪಾಂತರಿ BA.3.2 ಸಿಕಾಡಾ ಕಾಣಿಸಿಕೊಂಡು ವೇಗವಾಗಿ ಹರಡುತ್ತಿದೆ. ಈ ವೈರಸ್ ಈಗಾಗಲೇ ಕೆಲವು ದೇಶಗಳಲ್ಲಿ ಕಾಟ ಕೊಡಲಾರಂಭಿಸಿದೆ. ಅಮೆರಿಕದ ರೋಗ ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕೇಂದ್ರ ದೇಶದೆಲ್ಲೆಡೆ ನೀರಿನ ಮಾದರಿ ಪರೀಕ್ಷಿಸಿದ್ದು, 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ಹೊಸ ರೂಪಾಂತರಿ ಪತ್ತೆಯಾಗಿದೆ.

ಕೀಟದ ಹೆಸರು ಸಿಕಾಡಾ























































 
 

ಬಿಎ 3.2 ಅಥವಾ ʼಸಿಕಾಡಾʼ ಕೋವಿಡ್‌ನ ಹೊಸ ರೂಪಾಂತರವಾಗಿದ್ದು, ವ್ಯಾಪಕವಾಗಿ ಹರಡುತ್ತಿದೆ. ಸಿಕಾಡಾ ಎಂಬುದು ಒಂದು ಜಾತಿಯ ಕೀಟದ ಹೆಸರು. ಈ ಕೀಟಗಳು ದೀರ್ಘಕಾಲ ಭೂಮಿಯ ಅಡಿಯಲ್ಲಿ ಅಡಗಿದ್ದು, ದಿಢೀರನೆ ದೊಡ್ಡ ಸಂಖ್ಯೆಯಲ್ಲಿ ಹೊರಬರುತ್ತವೆ. ಅದೇ ರೀತಿ ಈ ವೈರಸ್ ಕೂಡ ಬಹಳ ದಿನಗಳ ಕಾಲ ಪತ್ತೆಯಾಗದೆ ಇದ್ದು, ಈಗ ಏಕಾಏಕಿ ಹರಡುತ್ತಿರುವುದರಿಂದ ಸಂಶೋಧಕರು ಈ ಹೆಸರಿಟ್ಟಿದ್ದಾರೆ.

ರೂಪಾಂತರಗೊಂಡ ಈ ಹೊಸ ಕೋವಿಡ್ ತಳಿ ಆರೋಗ್ಯ ಅಧಿಕಾರಿಗಳಲ್ಲಿ ಕಳವಳವನ್ನು ಹೆಚ್ಚಿಸುತ್ತಿದೆ. ಸಿಕಾಡಾ 75 ರೂಪಾಂತರಗಳನ್ನು ಹೊಂದಿದ್ದು, ಇದು ಇತರ ತಳಿಗಳಿಗಿಂತ ಹೆಚ್ಚು ಭಯಾನಕ ಆಗಿದೆ ಎಂದು ವರದಿಯಾಗಿದೆ. ಅಮೆರಿಕ ಸೇರಿದಂತೆ ಇತರ 22 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಹೊಸ ಕೋವಿಡ್‌ ರೂಪಾಂತರ ಬಿಎ.3.2 ಸಿಕಾಡಾ ಅಮೆರಿಕದ ಸುಮಾರು 20ಕ್ಕೂ ಅಧಿಕ ರಾಜ್ಯಗಳಲ್ಲಿ ಪತ್ತೆಯಾಗಿದೆ.

ಅಮೆರಿಕದ 4 ಪ್ರಯಾಣಿಕರಿಂದ ತೆಗೆದುಕೊಳ್ಳಲಾದ ಮೂಗಿನ ಸ್ವ್ಯಾಬ್‌ಗಳಲ್ಲಿ ಮತ್ತು ನಾಲ್ಕು ರಾಜ್ಯಗಳ ಐದು ರೋಗಿಗಳಿಂದ ತೆಗೆದುಕೊಳ್ಳಲಾದ ಕ್ಲಿನಿಕಲ್ ಮಾದರಿಗಳಲ್ಲಿ ಬಿಎ.3.2 ಎಂದು ಕರೆಯಲ್ಪಡುವ ಈ ರೂಪಾಂತರವು ಪತ್ತೆಯಾಗಿದೆ. ಸದ್ಯ ಇದರಿಂದ ಆತಂಕಗೊಳ್ಳುವ ಅಗತ್ಯವಿಲ್ಲ. ಪ್ರಸ್ತುತ ಲಭ್ಯವಿರುವ ಲಸಿಕೆಗಳಿಂದಲೇ ಇದನ್ನು ಗುಣಪಡಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಅಮೆರಿಕದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ತೆಗೆದುಕೊಳ್ಳಲಾದ 132 ತ್ಯಾಜ್ಯನೀರಿನ ಮಾದರಿಗಳಲ್ಲಿ ಈ ರೂಪಾಂತರಿ ಕಂಡುಬಂದಿದೆ. ಇದು ಸದ್ಯ ಅಂದಾಜಿಸುತ್ತಿರುವುದಕ್ಕಿಂತಲೂ ಹೆಚ್ಚು ವ್ಯಾಪಕವಾಗಿ ಹರಡಿರಬಹುದು ಎಂಬುದನ್ನು ಸೂಚಿಸುತ್ತಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಓಮಿಕ್ರಾನ್‌ನಿಂದ ಬಂದ ಕೋವಿಡ್‌ ಬಿಎ.3.2 ರೂಪಾಂತರವು ಮೊದಲ ಬಾರಿಗೆ 2024ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮತ್ತು ಜೂನ್ 2025ರಲ್ಲಿ ನೆದರ್‌ಲ್ಯಾಂಡ್ಸ್‌ನ ಪ್ರಯಾಣಿಕರಲ್ಲಿ ಪತ್ತೆಯಾಯಿತು. ಸೆಪ್ಟೆಂಬರ್ 2025ರಲ್ಲಿ ಈ ವೈರಸ್ ಹೆಚ್ಚಾಗಲು ಪ್ರಾರಂಭಿಸಿದ್ದು‌, ಅಂದಿನಿಂದ ಸುಮಾರು 23 ದೇಶಗಳಲ್ಲಿ ಇದು ಹರಡಿದೆ ಎಂದು ವರದಿಯಾಗಿದೆ.

ಲಕ್ಷಣಗಳು

BA.3.2 ರೂಪಾಂತರಿ ವೈರಸ್‌ ಕೋವಿಡ್‌ನಂತೆ ಸಾಮಾನ್ಯ ಲಕ್ಷಣಗಳನ್ನೇ ತೋರಿಸುತ್ತದೆ. ಜ್ವರ, ಒಣ ಕೆಮ್ಮು, ಗಂಟಲು ನೋವು, ಆಯಾಸ, ತಲೆನೋವು, ಮೈ ಕೈ ನೋವು ಮತ್ತು ಮೂಗು ಕಟ್ಟುವಿಕೆ ಇದರ ಪ್ರಮುಖ ಲಕ್ಷಣಗಳಾಗಿವೆ.

ಕೆಲವು ಸಂದರ್ಭಗಳಲ್ಲಿ ರುಚಿ ಅಥವಾ ವಾಸನೆ ಗ್ರಹಿಸುವಿಕೆ ಕಷ್ಟವಾಗಬಹುದು. ಗಂಭೀರ ಸಂದರ್ಭಗಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಆದರೆ ರೋಗದ ತೀವ್ರತೆ ವ್ಯಕ್ತಿಯ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.

error: Content is protected !!
Scroll to Top