ಪ್ರೊಪೆಸರ್‌ಗೆ ಥಳಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಬೆದರಿಕೆ
ಬೆಂಗಳೂರು: ಬೆಂಗಳೂರು ಸಮೀಪದ ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಶ್ರೀ ಸಿದ್ಧಾರ್ಥ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಅಬ್ದುಲ್ ಎಂಬಾತ ತರಗತಿಯಲ್ಲಿ ವಿದ್ಯಾರ್ಥಿನಿಗೆ ಲವ್ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಡಾ.ಅಬ್ದುಲ್‌ಗೆ ವಿದ್ಯಾರ್ಥಿನಿ ಚಪ್ಪಲಿಯಲ್ಲಿ ಹೊಡೆದ ವಿಡಿಯೋ ವೈರಲ್ ಆಗಿದೆ.
ಶುಕ್ರವಾರ ಮುಂಜಾನೆ ಕಾಲೇಜಿನ ಪ್ರಿನ್ಸಿಪಾಲ್ ಸೇರಿದಂತೆ ಅಧಿಕಾರಿಗಳ ಅಧಿಕೃತ ಇಮೇಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಸಂದೇಶದಲ್ಲಿ, ಡಾ.ಅಬ್ದುಲ್ ಅವರಿಗೆ ನಡೆದ ಅವಮಾನಕ್ಕೆ ಪ್ರತಿಯಾಗಿ, ಕಾಲೇಜು ಆವರಣದಲ್ಲಿ 15 ಸೈನೈಡ್ ಗ್ಯಾಸ್ ತುಂಬಿದ ಐಇಡಿ ಬಾಂಬ್‌ಗಳನ್ನು ಅಳವಡಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಸ್ಫೋಟವಾಗಲಿದೆ, ವಿದ್ಯಾರ್ಥಿಗಳನ್ನು ತಕ್ಷಣ ತೆರವುಗೊಳಿಸಿ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
ಈ ಇಮೇಲ್ ಅನ್ನು ‘ಡಾ.ಸೌರವ್ ಖಾನ್’ ಎಂಬ ಹೆಸರಿನಲ್ಲಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಈ ಸುದ್ದಿ ಹರಡುತ್ತಿದ್ದಂತೆ ಕಾಲೇಜು ಆಡಳಿತ ಹಾಗೂ ವಿದ್ಯಾರ್ಥಿಗಳಲ್ಲಿ ಕೆಲಕಾಲ ಭಾರಿ ಆತಂಕ ಉಂಟಾಗಿತ್ತು. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ , ಶ್ವಾನ ದಳ ಸ್ಥಳಕ್ಕೆ ಧಾವಿಸಿ ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಿದವು.
ಕಾಲೇಜಿನ ಪ್ರತಿಯೊಂದು ಕಟ್ಟಡ, ತರಗತಿ ಕೊಠಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಿದರೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ. ನಂತರ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಪೊಲೀಸರು ದೃಢಪಡಿಸಿದರು. ಇದೇ ವೇಳೆ, ಈ ಬೆದರಿಕೆ ಇಮೇಲ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

























