ರಘುಪತಿ ಭಟ್ ಪ್ರತಿಭಟನೆಗೆ ಮಣಿದು ಅನುಮತಿ ಪತ್ರ ನೀಡಿದ ಉಡಾ

ಉಡುಪಿ: ರೆಸಾರ್ಟ್ ನಿರ್ಮಾಣ ವಿಷಯದಲ್ಲಿ ಉಡಾ (ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ) ದ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಅವರು ನಡೆಸಿದ ಅನಿರ್ಧಿಷ್ಟಾವಧಿ ಧರಣಿಗೆ 12 ಗಂಟೆಗಳೊಳಗೆ ಫಲ ಸಿಕ್ಕಿದೆ.

ಬಡಾನಿಡಿಯೂರು ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಿಂಗಲ್ ಲೇಔಟ್ ನಕ್ಷೆ ನೀಡದೆ ಉಡಾ ಸತಾಯಿಸುತ್ತಿತ್ತು. ಅದರ ವಿರುದ್ಧ ರಘುಪತಿ ಭಟ್ ಅವರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಕುಳಿತಿದ್ದರು. ಅವರ ಪ್ರತಿಭಟನೆಗೆ ಮಣಿದು ಉಡಾ ತಾತ್ಕಾಲಿಕ ಅನುಮತಿ ಪತ್ರವನ್ನು ನೀಡಿದೆ. ಹಾಗೆಯೇ ಎಲ್ಲಾ ಕಾನೂನು ಪ್ರಕ್ರಿಯೆಗಳ ಪರಿಶೀಲನೆಯ ಬಳಿಕ ಪ್ರಾಧಿಕಾರದ ಆಯುಕ್ತ ಮಹೇಶ್ ಅವರು ಖುದ್ದಾಗಿ ತಾವೇ ರಘುಪತಿ ಭಟ್ ಅವರಿಗೆ ಪತ್ರ ಹಸ್ತಾಂತರ ಮಾಡಿದ್ದಾರೆ.

ಪ್ರವಾಸೋದ್ಯಮ ಉತ್ತೇಜನದ ದೃಷ್ಟಿಯಿಂದ ರಘುಪತಿ ಭಟ್ ಅವರು ಕಡಲ ತೀರದ ಬಡಾನಿಡಿಯೂರು ಸಮೀಪದ 90 ಸೆಂಟ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಮುಂದಾಗಿದ್ದರು. ಇದಕ್ಕಾಗಿ ಸಿಂಗಲ್ ಲೇಔಟ್ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ನಿಯಮಗಳ ಪ್ರಕಾರ 3 ತಿಂಗಳಲ್ಲಿ ಸಿಗಬೇಕಿದ್ದ ಅನುಮತಿಯನ್ನು, ಪ್ರಾಧಿಕಾರವು ವಿವಿಧ ನೆಪಗಳನ್ನೊಡ್ಡಿ ಕಳೆದ ಎರಡು ವರ್ಷಗಳಿಂದ (24 ತಿಂಗಳು) ವಿಳಂಬ ಮಾಡಿತ್ತು. ಹಾಲಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಕುಮ್ಮಕ್ಕಿನಿಂದಲೇ ಆಯುಕ್ತರು ಅನುಮತಿ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ, ಭಟ್ ಅವರು ಸೋಮವಾರ ಪ್ರಾಧಿಕಾರದ ಕಚೇರಿ ಎದುರು ಏಕಾಂಗಿಯಾಗಿ ಧರಣಿ ಆರಂಭಿಸಿದ್ದರು.























































 
 

ಅನುಮತಿ ಪತ್ರ ಸ್ವೀಕರಿಸಿ ಮಾತನಾಡಿದಅವರು, ಮೂರು ತಿಂಗಳಲ್ಲಿ ಸಿಗಬೇಕಿದ್ದ ಪತ್ರ 24 ತಿಂಗಳ ಬಳಿಕ ನನ್ನ ಕೈಸೇರಿದೆ. ಸದ್ಯ ತಾತ್ಕಾಲಿಕ ಅನುಮತಿ ಪತ್ರ ಸಿಕ್ಕಿದ್ದು, ರಸ್ತೆಗೆ ನಿಗದಿತ ಜಾಗ ಬಿಟ್ಟುಕೊಟ್ಟ ಬಳಿಕ ಶಾಶ್ವತ ಅನುಮತಿ ಪತ್ರ ಸಿಗಲಿದೆ. ಧರಣಿ ಕುಳಿತ ಬಳಿಕವಾದರೂ ನನಗೆ ನ್ಯಾಯ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ. ಹಾಗೆಯೇ,
ಇದು ರಾಜಕೀಯ ಪ್ರೇರಿತ ಹೋರಾಟವಲ್ಲ. ನನ್ನ ವೈಯಕ್ತಿಕ ಕೆಲಸಕ್ಕಾಗಿ ನಡೆದ ಧರಣಿ. ಆದರೆ, ನನ್ನ ವೈಯಕ್ತಿಕ ಕೆಲಸಗಳಿಗೆ ಶಾಸಕರು ಅಡ್ಡಿಪಡಿಸಿದ್ದರಿಂದ ಅನಿವಾರ್ಯವಾಗಿ ಅವರ ಹೆಸರು ಹೇಳಬೇಕಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

ಉಡಾ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಪ್ರಾಧಿಕಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಂಬಾಗಿಲು-ಮಣಿಪಾಲ ಹೆದ್ದಾರಿ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟ ಜನರಿಗೆ ಟಿಡಿಆ‌ರ್ (TDR) ನೀಡುತ್ತೇನೆಂದು ಹೇಳಿ 3 ವರ್ಷಗಳಾದರೂ ಇನ್ನೂ ನೀಡಿಲ್ಲ. ಸಾರ್ವಜನಿಕರ ಅನೇಕ ಕಡತಗಳು ಬಾಕಿ ಉಳಿದಿವೆ. ಈ ಎಲ್ಲ ಕಡತಗಳನ್ನು ಏಪ್ರಿಲ್ 11ರೊಳಗೆ ವಿಲೇವಾರಿ ಮಾಡದಿದ್ದರೆ, ಸಾರ್ವಜನಿಕರ ಪರವಾಗಿ ಪ್ರಾಧಿಕಾರದ ವಿರುದ್ಧ ಬೃಹತ್ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದರು.

error: Content is protected !!
Scroll to Top