ಉಪ್ಪಿನಂಗಡಿ: ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಕೊಂಡು ವಿವಾಹವಾಗುವುದಾಗಿ ನಂಬಿಸಿ, ಯುವತಿಯ ಖಾಸಗಿ ವಿಡಿಯೋ ಪಡೆದು ಅದನ್ನು ವಾಟ್ಸಾಪ್ ಮೂಲಕ ಹಂಚಿದ ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
20 ವರ್ಷದ ಯುವತಿ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ನಿವಾಸಿಯಾಗಿದ್ದು, ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಆರೋಪಿತ ಸುಶಾಂತ್ ಪೂಜಾರಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಇಬ್ಬರ ನಡುವೆ ಸ್ನೇಹ ಪ್ರೀತಿಗೆ ತಿರುಗಿ, ಮದುವೆಯಾಗುವುದಾಗಿ ನಿರ್ಧರಿಸಿದ್ದಾಗಿ ಹೇಳಲಾಗಿದೆ.
ಈ ನಡುವೆ, ಆರೋಪಿ ಯುವತಿಯನ್ನು ನಗ್ನವಾಗಿ ವಿಡಿಯೋ ಕಾಲ್ ಮಾಡಲು ಒತ್ತಾಯಿಸಿ, ಮದುವೆಯ ಭರವಸೆ ನೀಡಿದ್ದರಿಂದ ಆತನ ಮೇಲಿನ ನಂಬಿಕೆಯಿಂದ ಯುವತಿ ವಿಡಿಯೋ ಕಾಲ್‌ನಲ್ಲಿ ಭಾಗವಹಿಸಿದ್ದಾಳೆ. ಆದರೆ ಬಳಿಕ ಆರೋಪಿ ಆ ಖಾಸಗಿ ವಿಡಿಯೋವನ್ನು ವಾಟ್ಸಾಪ್ ಮೂಲಕ ಇತರರಿಗೆ ಹಂಚಿದನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿತನ ಸಹೋದರಿಯರೂ ಈ ಕೃತ್ಯಕ್ಕೆ ಸಹಕರಿಸಿದ್ದಾಗಿ ತಿಳಿದುಬಂದಿದೆ.
ಕೃತ್ಯ ಗಮನಕ್ಕೆ ಬಂದ ತಕ್ಷಣ ಯುವತಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿರುವುದಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























