ವಿಜಯವಾಡ: ಉಗ್ರವಾದಿ ಸಿದ್ಧಾಂತಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುತ್ತಿದ್ದ ಮತ್ತು ಉಗ್ರರ ಸಂಘಟನೆಗಳ ಜೊತೆೆಗ ಸಂಪರ್ಕ ಇರಿಸಿಕೊಂಡಿದ್ದ ಆರೋಪದಲ್ಲಿ ಮೂವರು ಶಂಕಿತರನ್ನು ಆಂಧ್ರಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶಂಕಿತ ಉಗ್ರರನ್ನು ಮಹಮ್ಮದ್ ರಹಮತುಲ್ಲಾ ಷರೀಫ್, ಮಿರ್ಜಾ ಸೊಹೈಲ್ ಬೇಗ್ ಮತ್ತು ಮಹಮ್ಮದ್ ದಾನಿಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ವಿಜಯವಾಡದ ಟೂ ಟೌನ್ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ. ಗುಪ್ತಚರ ಇಲಾಖೆಯ ಸಂಘಟಿತ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆನ್-ಲೈನ್ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರಿಗೆ, ಸದ್ಯ ಬಂಧನದಲ್ಲಿರುವ ಯುವಕರು ತೀವ್ರಗಾಮಿ ವಿಚಾರಧಾರೆ ಹಾಗೂ ಪ್ರಚೋದನಾಕಾರಿ ವಿಷಯಗಳನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ. “ಖಚಿತ ಮಾಹಿತಿಯ ಆಧಾರದ ಮೇಲೆ ನಮ್ಮ ತಂಡಗಳು ದಾಳಿ ನಡೆಸಿ ಮೂವರನ್ನು ಬಂಧಿಸಿವೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಉಗ್ರಗಾಮಿ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಯುವಕರು ದೇಶಾದ್ಯಂತ ಸಕ್ರಿಯವಾಗಿರುವ ಸುಮಾರು 10 ಸದಸ್ಯರ ತಂಡದ ಭಾಗವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಗುಂಪು ಯುವಕರನ್ನು ಆಕರ್ಷಿಸಿ, ಅವರನ್ನು ತೀವ್ರಗಾಮಿ ಚಟುವಟಿಕೆಗಳತ್ತ ಸೆಳೆಯಲು ಪ್ರಯತ್ನಿಸುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಸ್ತುತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

























