ಜಾಗತಿಕ ಇಂಧನ ಕೊರತೆ ಹಿನ್ನೆಲೆಯಲ್ಲಿ ಐಇಎಯಿಂದ ದೇಶಗಳಿಗೆ ಸಲಹೆ
ನವದೆಹಲಿ : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕವಾಗಿ ತೀವ್ರ ಇಂಧನ ಕೊರತೆ ತಲೆದೋರಿರುವ ಹಿನ್ನೆಲೆಯಲ್ಲಿ ಇಂಧನ ಬಳಕೆ ಮೇಲೆ ಮಿತಿ ಹೇರಲು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಕೆಲವೊಂದು ಸಲಹೆಗಳನ್ನು ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೋವಿಡ್ ಸಂದರ್ಭದ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿದರೆ ಇಂಧನ ಬಳಕೆಯಲ್ಲಿ ಮಿಯವ್ಯಯ ಸಾಧಿಸಬಹುದು ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಶಿಫಾರಸು ಮಾಡಿದೆ. ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಬಿಕ್ಕಟ್ಟಿನ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ನಿರ್ವಹಿಸಲು ಇಂಧನ ಮತ್ತು ಗ್ಯಾಸ್ ಬಳಕೆ ಕಡಿತಗೊಳಿಸುವಂತೆ ಐಇಎ ಪ್ರಮುಖ ಶಿಫಾರಸುಗಳನ್ನು ಮಾಡಿದೆ.
ಪೆಟ್ರೋಲ್ ಉಳಿಸುವುದಕ್ಕಾಗಿ ಮನೆಯಿಂದಲೇ ಕೆಲಸ ಮಾಡುವುದನ್ನು ಪ್ರೋತ್ಸಾಹಿಸುವುದು (ವರ್ಕ್ ಫ್ರಂ ಹೋಂ), ಹೆದ್ದಾರಿಗಳಲ್ಲಿ ವಾಹನಗಳ ವೇಗ ಮಿತಿಯನ್ನು ಕನಿಷ್ಠ 10 ಕಿಲೋಮೀಟರ್‌ನಷ್ಟು ಕಡಿತಗೊಳಿಸಲು ಸಂಸ್ಥೆ ಸಲಹೆ ನೀಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯನ್ನು ತಗ್ಗಿಸಲು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವುದು ಹಾಗೂ ದೊಡ್ಡ ನಗರಗಳಲ್ಲಿ ಸಮ-ಬೆಸ ಮಾದರಿಯಲ್ಲಿ ಕಾರುಗಳ ಸಂಚಾರವನ್ನು ನಿರ್ಬಂಧಿಸಲು ಐಇಎ ಶಿಫಾರಸು ಮಾಡಿದೆ. ಕಾರುಗಳಲ್ಲಿ ಶೇರಿಂಗ್ ಮೂಲಕ ಪ್ರಯಾಣಿಸಲು ಪ್ರೋತ್ಸಾಹ ನೀಡುವುದು, ವಾಣಿಜ್ಯ ವಾಹನಗಳ ದಕ್ಷ ಚಾಲನೆಗಾಗಿ ಲೋಡ್ ಆಪ್ಟಿಮೈಸೇಷನ್ ಮತ್ತು ಉತ್ತಮ ನಿರ್ವಹಣೆಯನ್ನು ಪ್ರೋತ್ಸಾಹಿಸಲು ಸಲಹೆ ನೀಡಿದೆ.
ಅಡುಗೆಯಂತಹ ಅಗತ್ಯಗಳಿಗೆ ಮಾತ್ರ ಎಲ್‌ಪಿಜಿಯನ್ನು ಬಳಸಬೇಕು ಎಂದು ಸಂಸ್ಥೆ ಹೇಳಿದೆ. ಸಾರಿಗೆ ಮತ್ತು ಇತರ ಕೆಲಸಗಳಿಗೆ ಎಲ್‌ಪಿಜಿ ಬಳಕೆ ಬೇಡ, ವಿಮಾನ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಮತ್ತು ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕರೆಂಟ್ ಸ್ಟವ್ ಹಾಗೂ ಪರ್ಯಾಯ ಆಯ್ಕೆಗಳನ್ನು ಪ್ರೋತ್ಸಾಹಿಸಲು ಸೂಚಿಸಲಾಗಿದೆ. ಕೈಗಾರಿಕೆಗಳಲ್ಲಿ ಎಲ್‌ಪಿಜಿ ಬದಲಿಗೆ ನೈಸರ್ಗಿಕ ಅನಿಲ, ಬ್ಯೂಟೇನ್, ಪ್ರೋಪೇನ್, ಇಥೇನ್ ಮುಂತಾದ ಅನಿಲಗಳನ್ನು ಬಳಸಲು ಐಇಎ ಸಲಹೆ ನೀಡಿದೆ.

























