ವಿದ್ಯುತ್ ಗುತ್ತಿಗೆದಾರರಿಂದ ಲಂಚ ಕೇಳಿದ್ದ ಅಧಿಕಾರಿ
ಮಂಗಳೂರು: ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ಒಳಪಟ್ಟ ದಾರಿದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳ ನಿರ್ವಹಿಸಿದ ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಿಗೆ ಕೆಲಸದ ಬಿಲ್ ಪಾವತಿಗೆ ಶೇ.4ರಂತೆ 22,600 ರೂ. ಕೊಡಬೇಕು ಎಂದು ಲಂಚದ ಬೇಡಿಕೆ ಇರಿಸಿದ್ದ ಮಂಗಳೂರು ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕನನ್ನು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ತಂಡ ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ. ಎಸ್.ಡಿ.ಎ ಸಂಪತ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ದೂರುದಾರರು ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದು, 2025ರ ಸಾಲಿನಲ್ಲಿ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ಒಳಪಟ್ಟ ದಾರಿದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಈ ಕೆಲಸದ ಬಿಲ್‌ಗೆ 4 ಪರ್ಸೆಂಟ್‌ನಂತೆ ಒಟ್ಟು 22,600 ರೂ. ಕೊಡಬೇಕು ಎಂಬುದಾಗಿ ಮಂಗಳೂರಿನ ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಎಸ್.ಡಿ.ಎ ಸಂಪತ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫೆ.28ರಂದು ಆರೋಪಿ ಸಂಪತ್ ದೂರುದಾರರಿಂದ 22,600 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
























