ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯಡಿ ಅಕ್ಷಯ ಕಾಲೇಜು ಪುತ್ತೂರು ವತಿಯಿಂದ “ನನ್ನ ಭಾರತಕ್ಕಾಗಿ ಯುವಜನತೆ – ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ” ಎಂಬ ಆಶಯದೊಂದಿಗೆ ಆಯೋಜಿಸಲಾದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಶ್ರೀ ರಾಮಚಂದ್ರ ಪದವಿ ಪರ‍್ವ ವಿದ್ಯಾಲಯದಲ್ಲಿ ನೆರವೇರಿತು.
ಅಧ್ಯಕ್ಷತೆಯನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ವಹಿಸಿದ್ದರು.

ಅಧ್ಯಕ್ಷ ಜಯಂತ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಏಳು ದಿನಗಳ ಕಾಲ ಪರ್ನೆ ಪರಿಸರವನ್ನು ಆಯ್ಕೆ ಮಾಡಿಕೊಂಡು ಶಿಬಿರವನ್ನು ಯಶಸ್ವಿಯಾಗಿ ನಡೆಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಶಿಬಿರಾರ್ಥಿಗಳ ಶ್ರಮ, ಶಿಸ್ತು ಮತ್ತು ಸಮರ್ಪಣಾ ಮನೋಭಾವವನ್ನು ಅವರು ವಿಶೇಷವಾಗಿ ಪ್ರಶಂಸಿಸಿದರು.
ಮುಖ್ಯ ಅತಿಥಿ ಶೇಖರ್ ರೈ ಕೆ. (ಪ್ರಾಂಶುಪಾಲರು, ಶ್ರೀ ರಾಮಚಂದ್ರ ವಿದ್ಯಾಲಯ) ಅವರು ಉಪಸ್ಥಿತರಿದ್ದು, ಅಕ್ಷಯ ಕಾಲೇಜು ಈ ಬಾರಿ ನಮ್ಮ ಸಂಸ್ಥೆಯನ್ನು ಶಿಬಿರಕ್ಕಾಗಿ ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಆರಂಭದಲ್ಲಿ ಸ್ವಲ್ಪ ಆತಂಕ ಇದ್ದರೂ, ಶಿಬಿರಾರ್ಥಿಗಳು ಏಳು ದಿನಗಳ ಕಾಲ ಶಿಸ್ತಿನಿಂದ ಕಾರ್ಯ ನಿರ್ವಹಿಸಿ ಪರಿಸರ ಸ್ವಚ್ಛತೆ, ಸಾಮಾಜಿಕ ಜಾಗೃತಿ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಉತ್ತಮ ಮಾದರಿಯನ್ನೇ ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೊಬ್ಬ ಅತಿಥಿ ಸತ್ಯನಾರಾಯಣ ರೈ ಕೆ.ಎಂ., (ಮುಖ್ಯಗುರುಗಳು, ಶ್ರೀ ರಾಮಚಂದ್ರ ಪ್ರೌಢಶಾಲೆ, ಅಯೋಧ್ಯನಗರ ಪೆರ್ನೆ)ಮಾತನಾಡಿ, ಅಕ್ಷಯ ಸಂಸ್ಥೆಯ ಶಿಸ್ತುಬದ್ಧ ಕಾರ್ಯಪದ್ಧತಿ ಪರ್ನೆ ಪರಿಸರದ ಜನಮನ ಗೆದ್ದಿದೆ. ಅಯೋಧ್ಯನಗರವನ್ನು ಹಸಿರುಮಯವಾಗಿಸಲು ಶಿಬಿರಾರ್ಥಿಗಳು ಮಾಡಿದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಹಾಲು ಉತ್ಪಾದಕರ ಸಂಘದ ಸದಸ್ಯ ರಮೇಶ್ ಕೋಟ ಅವರು ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಸುಂದರ ಉದ್ಯಾನವನ ನಿರ್ಮಿಸಿರುವುದನ್ನು ಕೊಂಡಾಡಿದರು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಕೇವಲ ಒಂದು ಯೋಜನೆಯಲ್ಲ; ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ, ಸಾಮಾಜಿಕ ಹೊಣೆಗಾರಿಕೆ ಮತ್ತು ರಾಷ್ಟ್ರಭಕ್ತಿಯ ಮನೋಭಾವ ಬೆಳೆಸುವ ಶಕ್ತಿಯುತ ವೇದಿಕೆ ಎಂದು ಹೇಳಿದರು. ಶಿಬಿರದ ಯಶಸ್ಸಿಗೆ ಕೈಜೋಡಿಸಿದ ಎಲ್ಲಾ ಗಣ್ಯರು, ಶಿಕ್ಷಕರು, ಗ್ರಾಮಸ್ಥರು ಹಾಗೂ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು.
ಅನಂತರ ಅಕ್ಷಯ ಕಾಲೇಜಿನ ಉಪಪ್ರಾಂಶುಪಾಲ ರಕ್ಷಣ್ ಟಿ.ಆರ್. ಅವರು ಮಾತನಾಡಿ, NSS ಶಿಬಿರದಲ್ಲಿ ಕಲಿತ ಶಿಸ್ತು, ಸೇವಾ ಮನೋಭಾವ, ಸಹಕಾರ, ನಾಯಕತ್ವ ಹಾಗೂ ಜೀವನಮೌಲ್ಯಗಳನ್ನು ನಿತ್ಯ ಜೀವನದಲ್ಲೂ ಅಳವಡಿಸಿಕೊಂಡರೆ ಮಾತ್ರ ಶಿಬಿರದ ಸಾರ್ಥಕತೆ ಸಾಧ್ಯವೆಂದು ತಿಳಿಸಿದರು. ಸಮಾಜ ಸೇವೆಯ ಮೂಲಕವೇ ಒಳ್ಳೆಯ ನಾಗರಿಕರನ್ನು ರೂಪಿಸಬಹುದು ಎಂಬ ಸಂದೇಶ ನೀಡಿದರು
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಮೇಘಶ್ರೀ ಅವರು ಶಿಬಿರದ ಅವಧಿಯಲ್ಲಿ ಕೈಗೊಂಡ ಪರಿಸರ ಸ್ವಚ್ಛತಾ ಕಾರ್ಯಗಳು, ಜಾಗೃತಿ ಕಾರ‍್ಯಕ್ರಮಗಳು ಹಾಗೂ ಶಿಬಿರಾರ್ಥಿಗಳ ದಿನಚರಿಯ ಕುರಿತು ವಿವರಿಸಿದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಯೋಜನಾಧಿಕಾರಿ ರಾಕೇಶ್ ಕೆ. ಅವರು ಶಿಬಿರದ ಯಶಸ್ಸಿಗೆ ತನು ಮನ ಧನ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ವಾರ್ಷಿಕ ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದ “ಧರ್ಮರಾಯ” ತಂಡಕ್ಕೆ ಟ್ರೋಫಿ ಪ್ರದಾನ ಮಾಡಲಾಯಿತು.
ಸಹ ಯೋಜನಾಧಿಕಾರಿಗಳಾದ ಗಂಧರ್ವ ಮತ್ತು ಕು. ಸೌಜನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿ ಯಶಸ್ವಿ ಪ್ರಾರ್ಥಿಸಿದರು. ಸ್ವಾಗತ ಭಾಷಣವನ್ನು ರಾಷ್ಟ್ರೀಯ ಸೇವಾ ಯೋಜನೆಯ ಘಟಕ–೧ರ ನಾಯಕ ಜಿಗ್ನೇಶ್ ನೆರವೇರಿಸಿದರು. ಧನ್ಯವಾದವನ್ನು ಘಟಕ–೨ರ ನಾಯಕಿ ಕೋಮಲಾಕ್ಷಿ ಸಲ್ಲಿಸಿದರು. ಸಮಾರೋಪ ಸಮಾರಂಭವನ್ನು ಅಕ್ಷಿತ್ ನಿರ್ವಹಿಸಿದರು.
























