ಪಾಕ್ ಬಹಿಷ್ಕಾರದಿಂದ ಭಾರತಕ್ಕಾಗುವ ಪರಿಣಾಮ ಏನು?
ಮುಂಬಯಿ: ಬಾಂಗ್ಲಾದೇಶದ ಬಳಿಕ ಪಾಕಿಸ್ತಾನ ಟಿ20 ವಿಶ್ವಕಪ್ ಬಗ್ಗೆ ಖ್ಯಾತೆ ತೆಗೆದಿದೆ. ಭಾರತದಲ್ಲಿ ಆಡಲು ನಿರಾಕರಿಸಿದ ಬಾಂಗ್ಲಾದೇಶವನ್ನಿ ಈಗಾಗಲೇ ವಿಶ್ವಕಪ್ ಟೂರ್ನಿಯಿಂದ ಹೊರಗಿಡಲಾಗಿದೆ. ಇದರ ಬೆನ್ನಿಗೆ ಎಲ್ಲೇ ಪಂದ್ಯ ನಡೆದರೂ ಭಾರತದ ಜೊತೆ ಆಡಲಾರೆ ಎಂದು ಪಾಕಿಸ್ತಾನ ಹೇಳಿದೆ.
ಕಳೆದ ಕೆಲವು ದಿನಗಳಿಂದ ಟಿ20 ವಿಶ್ವಕಪ್ನಲ್ಲಿ ನಮ್ಮ ತಂಡ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ತಂಡ ಟಿ20 ವಿಶ್ವಕಪ್ನಲ್ಲಿ ಆಡುವುದನ್ನು ಪಾಕಿಸ್ತಾನ ಸರ್ಕಾರ ಖಚಿತಪಡಿಸಿದೆ, ಆದರೆ ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯವನ್ನು ಆಡುವುದಿಲ್ಲ ಎಂದಿದೆ. ರಾಜಕೀಯ ಮತ್ತು ಇತ್ತೀಚಿನ ಬೆಳವಣಿಗೆಗಳ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೆಲವು ದಿನಗಳ ಹಿಂದೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಮ್ಮ ತಂಡ ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವುದು ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದಿದ್ದರು. ಆ ಬಳಿಕ ಸರ್ಕಾರದೊಂದಿಗೆ ಚರ್ಚೆ ನಡೆಸಿ ತಂಡವನ್ನು ಪ್ರಕಟಿಸಿದ್ದರು. ಆದರೆ ಭಾರತದ ವಿರುದ್ಧದ ಪಂದ್ಯವನ್ನು ಆಡುವುದರ ಬಗ್ಗೆ ಮಾತ್ರ ಏನನ್ನೂ ಹೇಳಿರಲಿಲ್ಲ. ಆದರೀಗ ಪಾಕಿಸ್ತಾನ ಕ್ರಿಕೆಟ್ ತಂಡ ಶ್ರೀಲಂಕಾಕ್ಕೆ ಪ್ರಯಾಣಿಸಲು ಪಾಕಿಸ್ತಾನ ಸರ್ಕಾರದಿಂದ ಅನುಮತಿ ಪಡೆದಿದ್ದು, ಅಲ್ಲಿ ತನ್ನ ಎಲ್ಲ ಗ್ರೂಪ್ ಎ ಪಂದ್ಯಗಳನ್ನು ಆಡಲಿದೆ.
ರಾಜಕೀಯ ಕಾರಣಗಳಿಂದಾಗಿ ಪಾಕಿಸ್ತಾನ ಭಾರತದಲ್ಲಿ ಆಡಲು ನಿರಾಕರಿಸಿದ್ದರಿಂದ, ಐಸಿಸಿ ಪಾಕ್ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ಅದರಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೀಗ, ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ.
ಈ ನಿರ್ಧಾರದಿಂದಾಗಿ ಪಾಕಿಸ್ತಾನ ಗುಂಪು ಹಂತದಲ್ಲಿ ಎರಡು ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಯಾವುದೇ ತಂಡವು ನಿಗದಿಪಡಿಸಿದ ಪಂದ್ಯವನ್ನು ಆಡಲು ನಿರಾಕರಿಸಿದರೆ, ಎದುರಾಳಿ ತಂಡಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಇದರರ್ಥ ಟೀಂ ಇಂಡಿಯಾಕ್ಕೆ ಆಡದೆಯೇ ಎರಡು ಅಂಕಗಳು ಸಿಗಲಿದೆ. ಆದರೆ ಉಭಯ ತಂಡಗಳ ಈ ಪಂದ್ಯ ರದ್ದಾಗಿರುವುದರಿಂದ ಐಸಿಸಿಗೆ ಆರ್ಥಿಕ ನಷ್ಟವಾಗುವುದಂತೂ ಖಚಿತ. ಭಾರತ ಮತ್ತು ಪಾಕಿಸ್ತಾನ ಪಂದ್ಯ ವಿಶ್ವಕಪ್ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಮತ್ತು ಆದಾಯ ಗಳಿಸುವ ಪಂದ್ಯವಾಗಿದೆ. ಈ ಪಂದ್ಯ ನಡೆಯದಿರುವುದರಿಂದ ಐಸಿಸಿಗೆ ನಷ್ಟವಾಗುವುದು ಮಾತ್ರವಲ್ಲದೆ, ಪಾಕಿಸ್ತಾನ ಕೂಡ ಗಮನಾರ್ಹ ನಷ್ಟವನ್ನು ಎದುರಿಸಬೇಕಾಗುತ್ತದೆ.
























