ಇಡೀ ತನಿಖೆಯ ದಿಕ್ಕನ್ನೇ ಬದಲಿಸುವ ಮಾಹಿತಿ ಡೈರಿಯಲ್ಲಿ ಪತ್ತೆ
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ನಿರ್ಧರಿಸಿದ್ದರೇ? ಅವರ ಡೈರಿಯಲ್ಲಿರುವ ಕೆಲವೊಂದು ಮಾಹಿತಿ ಸಿ.ಜೆ.ರಾಯ್ ಆತ್ಮಹತ್ಯೆ ಆ ಕ್ಷಣದ ನಿರ್ಧಾರವಲ್ಲ, ಬದಲಾಗಿ ಅವರು ಮೊದಲೇ ಆತ್ಮಹತ್ಯೆಗೆ ತಯಾರಿ ಮಾಡಿಕೊಂಡಿದ್ದರು ಎಂಬ ಸುಳಿವು ನೀಡುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಆದಾಯಕರ ಇಲಾಖೆಯ ಕಿರುಕುಳದಿಂದ ಐಟಿ ದಾಳಿ ನಡೆಯುತ್ತಿರುವಾಗಲೇ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಡೈರಿಯಲ್ಲಿ ಅವರು ಬರೆದಿಟ್ಟಿರುವ ಕೆಲವು ವಿಚಾರಗಳು ತನಿಖೆಯ ದಿಕ್ಕನ್ನು ಬದಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಲವು ವೈಯಕ್ತಿಕ ಸಮಸ್ಯೆಗಳು, ಹಣಕಾಸಿನ ವಿಚಾರಗಳನ್ನು ಅವರು ಡೈರಿಯಲ್ಲಿ ಬರೆದಿಟ್ಟಿದ್ದಾರೆ. ಡೈರಿಯಲ್ಲಿ ಅವರ ತನ್ನ ಕುಟುಂಬದಿಂದ ಕ್ಷಮೆ ಕೇಳುವ ಪತ್ರವೊಂದು ಸಿಕ್ಕಿದೆ. ಇದು ಅವರು ಕೌಟುಂಬಿಕ ಸಮಸ್ಯೆಯಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ನೀಡುತ್ತಿದೆ. ಇದಲ್ಲದೆ ಡೈರಿಯಲ್ಲಿ ಹಣಕಾಸಿನ ಕೆಲವು ವಿಚಾರಗಳನ್ನೂ ಬರೆದಿಟ್ಟಿದ್ದಾರೆ.
ಹೂಡಿಕೆದಾರರಿಗೆ ಹಣ ವಾಪಸ್ ನೀಡುವುದು, ನೌಕರರನ್ನು ಉಳಿಸಿಕೊಳ್ಳುವುದು, ತನ್ನ ನಂತರ ವ್ಯವಹಾರವನ್ನು ಯಾರು ಮುನ್ನಡೆಸಬೇಕು ಎಂಬ ವಿಚಾರಗಳನ್ನು ಬರೆದಿದ್ದಾರೆ. ಈ ವಿಚಾರಗಳ ಆತ್ಮಹತ್ಯೆ ತಕ್ಷಣದ ನಿರ್ಧಾರವಲ್ಲ ಎನ್ನುವುದನ್ನು ಸೂಚಿಸುತ್ತವೆ. ಅವರ ಫೋನನ್ನು ವಿಧಿವಿಜ್ಞಾನ ಪರೀಕ್ಷೆಗೊಳಪಡಿಸಿದ ಬಳಿಕ ಹೆಚ್ಚಿನ ಮಾಹಿತಿ ತಿಳಿಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನಲ್ಲಿ 8500 ಕೋ. ರೂ. ಮೌಲ್ಯದ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಕೇರಳ ಮೂಲದ ಸಿ.ಜೆ.ರಾಯ್ ಕಳೆದ ಶುಕ್ರವಾರ ಕಚೇರಿಗೆ ಆದಾಯ ಕರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
























