ಬೈಕಿನಲ್ಲಿ ಬಂದು ಗುಂಡಿಕ್ಕಿ ಪಲಾಯನ ಮಾಡಿದ ಅಜ್ಞಾತ ದುಷ್ಕರ್ಮಿಗಳು
ಪುಣೆ: 2012ರಲ್ಲಿ ಪುಣೆಯಲ್ಲಿ ಸಂಭವಿಸಿದ ಸ್ಫೋಟ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಅನಾಮಿಕರು ಗುಂಡಿಕ್ಕಿ ಕೊಂದು ಹಾಕಿದ್ದಾರೆ ಎಂದು ವರದಿಯಾಗಿದೆ. 2012ರ ಪುಣೆ ಸರಣಿ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಬಂಟಿ ಜಹಗೀರ್ದಾರ್ ಎಂಬಾತನನ್ನು ಬುಧವಾರ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶ್ರೀರಾಂಪುರ ಪಟ್ಟಣದಲ್ಲಿ ಅನಾಮಿಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
50 ವರ್ಷದ ಜಹಗೀರ್ದಾರ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೊರಾವಕೆ ಕಾಲೇಜು ರಸ್ತೆಯಲ್ಲಿರುವ ಸ್ಮಶಾನದಿಂದ ದ್ವಿಚಕ್ರ ವಾಹನದಲ್ಲಿ ಬಂದ ಮತ್ತೊಬ್ಬ ವ್ಯಕ್ತಿಯೊಂದಿಗೆ ಹಿಂತಿರುಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮೇಲೆ ದಾಳಿ ಮಾಡಿದ್ದಾರೆ.
ಗುಂಡೇಟಿನಿಂದ ತೀವ್ರ ಗಾಯಗೊಂಡ ಜಹಗೀರ್ದಾರ್ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಅವರು ಸಾವನ್ನಪ್ಪಿದ್ದರು. ದಾಳಿಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ. ಪ್ರಕರಣದ ತನಿಖೆಗಾಗಿ ಬಹು ತಂಡಗಳನ್ನು ರಚಿಸಲಾಗಿದೆ ಮತ್ತು ತನಿಖೆ ಮುಂದುವರಿದಿದೆ ಎಂದು ಅಹಲ್ಯಾನಗರ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.
ಜಂಗ್ಲಿ ಮಹಾರಾಜ್ ರಸ್ತೆ ಸರಣಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಜಹಗೀರ್ದಾರ್ನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿತ್ತು. ಆಗಸ್ಟ್ 1, 2012ರಂದು ಪುಣೆಯ ಹೃದಯಭಾಗದಲ್ಲಿರುವ ಜನನಿಬಿಢ ರಸ್ತೆ, ಬಾಲಗಂಧರ್ವ ಥಿಯೇಟರ್ ಬಳಿ, ದೇನಾ ಬ್ಯಾಂಕ್ ಶಾಖೆ, ಮೆಕ್ಡೊನಾಲ್ಡ್ಸ್ ಔಟ್ಲೆಟ್ ಮತ್ತು ಗರ್ವಾರೆ ಸೇತುವೆ ಬಳಿ ನಾಲ್ಕು ಸಂಘಟಿತ ಕಡಿಮೆ ತೀವ್ರತೆಯ ಸ್ಫೋಟಗಳು ಸಂಭವಿಸಿದ್ದವು.
























