ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ (ರಿ.) ಬೆಂಗಳೂರು ಇದರ ನೂತನ ಗೌರವಾಧ್ಯಕ್ಷರಾಗಿ ಬೆಂಗಳೂರು ಮಹಾನಗರದಲ್ಲಿ ಪ್ರಸ್ತುತ ನೆಲೆಸಿರುವ ಯಕ್ಷಗಾನ ಕಲಾ ಪೋಷಕ ಆರ್.ಕೆ.ಭಟ್ ಬೆಳ್ಳಾರೆ ಇವರನ್ನು ಆಯ್ಕೆಮಾಡಲಾಗಿದೆ ಎಂದು ಟ್ರಸ್ಟ್ ನ ಸರ್ವ ಸದಸ್ಯರ ಸಭೆಯ ಬಳಿಕ ಅಧ್ಯಕ್ಷ ವೆಂಕಟೇಶ್ ರಾವ್ ಕೆ ಪ್ರಕಟಿಸಿದ್ದಾರೆ.
2019ರಲ್ಲಿ ‘ಯಕ್ಷಮಿತ್ರರು ಬೆಂಗಳೂರು’ ಯಕ್ಷಗಾನಾಸಕ್ತರ ವಾಟ್ಸಾಪ್ ಗ್ರೂಪ್ ರಚನೆಯಾಗಿತ್ತು. ಬಳಿಕ ಅದರ ಮೂಲಕ ಕಲೆ, ಯಕ್ಷಗಾನ, ತಾಳಮದ್ದಳೆ ಪೋಷಿಸುವ ಸದುದ್ದೇಶದಿಂದ ಬೆಂಗಳೂರಿನಲ್ಲಿ ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ಎಂದು 2024 ರಲ್ಲಿ ನೋಂದಣಿಯಾಗಿದೆ.
https://www.yakshamitraru.com ಎನ್ನುವ ಸ್ವಂತ ವೆಬ್ ಸೈಟ್ ಹೊಂದಿದ್ದು, ಕಳೆದ ಎರಡು ವರುಷಗಳಿಂದ ಕೀರ್ತಿ ಶೇಷ ಕಲಾವಿದರ ಭಾವಚಿತ್ರ ಇರುವ ಸಾವಿರಕ್ಕೂ ಅಧಿಕ ಕ್ಯಾಲೆಂಡರ್ ಮುದ್ರಿಸಿ ಹಂಚುವ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಟ್ರಸ್ಟ್ ಈಗಾಗಲೇ ಹದಿನೈದಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜಿಸಿ “ಶಿಕ್ಷಕರ ದಿನಾಚರಣೆ” ಪ್ರಯುಕ್ತ ಸುಮಾರು ಐದು ವರುಷಗಳಿಂದ ಶಿಕ್ಷಕರ / ಕಲಾವಿದರ ಗೌರವಾಭಿನಂದನೆ ಕಾರ್ಯಕ್ರಮ ಸಂಘಟಿಸಿದೆ.
ಮುಂದೆ ಹಲವು ಕಾರ್ಯಕ್ರಮ ಮಾಡುವ ಉದ್ದೇಶ ಈ ಬಳಗಕ್ಕೆ ಇದ್ದು , ಬೆಂಗಳೂರಿನ ಕಲಾಸಕ್ತರ ಸರ್ವ ಸಹಕಾರ ಇದಕ್ಕೆ ಪೂರಕವಾಗಿ ಇರಲಿದೆ ಮಾತ್ರವಲ್ಲದೆ ಇದಕ್ಕೆ “ಯಕ್ಷಗಾನ ಕಲಾ ಪೋಷಕ ಆರ್.ಕೆ.ಭಟ್ ಬೆಳ್ಳಾರೆ” ಗೌರವಾಧ್ಯಕ್ಷರಾಗಿ ನಮ್ಮ ಜೊತೆ ಸೇರಿ ಮುನ್ನಡೆಸುವುದು ನಮಗೆಲ್ಲ ಹೆಮ್ಮೆ ಮತ್ತು ಆನೆ ಬಲ ಬಂದಂತಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಶ್ಯಾಮಸೂರ್ಯ ಮುಳಿಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























