ಪಾಲಿಶಿಂಗ್‌ ನೆಪದಲ್ಲಿ 14 ಗ್ರಾಂ ಚಿನ್ನ ಎಗರಿಸಿದ ವಂಚಕ

ದಾರಿಮಧ್ಯೆ ಸಿಕ್ಕ ಅಪರಿಚಿತನ ಮಾತು ನಂಬಿ ಮೋಸ ಹೋದ ಮಹಿಳೆ

ಮಂಗಳೂರು : ಆಭರಣ ಪಾಲಿಶಿಂಗ್ ಮಾಡಿಕೊಡುವ ಸೋಗಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ವಿಧವೆಯೋರ್ವರನ್ನು ಯಾಮಾರಿಸಿ ಆಕೆಯ ಕತ್ತಿನ ಸರದಿಂದ 14 ಗ್ರಾಂ ಚಿನ್ನವನ್ನು ಕರಗಿಸಿ ಹೊತ್ತೊಯ್ದ ಘಟನೆ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಎಂಬಲ್ಲಿ ನಡೆದಿದೆ. ಉಳ್ಳಾಲ ತಾಲೂಕಿನ ಅಂಬ್ಲಮೊಗರು ನಿವಾಸಿ ಸುಂದರಿ (60) ವಂಚಕನಿಂದ‌ ಮೋಸ ಹೋದವರು.

ಸುಂದರಿ ಅವರು ದಿನನಿತ್ಯಲೂ ಸುದರ್ಶನ್ ಶೆಟ್ಟಿ ಎಂಬವರ ಮನೆಗೆ ಕೆಲಸಕ್ಕೆ ತೆರಳಿ ಮಧ್ಯಾಹ್ನ 12 ಗಂಟೆಗೆ ಮರಳುತ್ತಿದ್ದರು. ಬುಧವಾರವೂ ಕೆಲಸಕ್ಕೆ ತೆರಳಿದ್ದ ಅವರು ಬೆಳಿಗ್ಗೆ 11.30ಕ್ಕೆ ಕೆಲಸ ಮುಗಿಸಿ ಹಿಂತಿರುಗಿದ್ದರು. ಅವರು ಮನೆಯ ಕಡೆ ತೆರಳುತ್ತಿದ್ದ ವೇಳೆ ಅಂಬ್ಲಮೊಗರುವಿನ ಕಂಬಳ ಗದ್ದೆಯ ನಿರ್ಜನ ಬದುವಲ್ಲಿ ಓರ್ವ ಅಪರಿಚಿತ ಮಧ್ಯ ವಯಸ್ಕ‌ ಎದುರಾಗಿದ್ದು ಈ ಪ್ರದೇಶದಲ್ಲಿ ಎಷ್ಟು ಮನೆಗಳು ಇವೆಯೆಂದು ಸುಂದರಿಯವರಲ್ಲಿ ವಿಚಾರಿಸಿದ್ದ.





















































 
 

ಈ ವೇಳೆ ಆತ ತನ್ನಲ್ಲಿದ್ದ ಬ್ಯಾಗಿನಿಂದ ಚಿನ್ನವನ್ನು ಹೋಲುವ ಬಳೆಯೊಂದನ್ನು ಹೊರತೆಗೆದು ತೋರಿಸಿ ತಾನು ಈ ರೀತಿ ಹೊಳಪು ಬರುವಂತೆ ಚಿನ್ನಾಭರಣಗಳನ್ನು ಪಾಲಿಶ್ ಮಾಡುತ್ತೇನೆಂದು ಹೇಳಿ ನಿಮ್ಮಲ್ಲಿರುವ ಚಿನ್ನದ ಸರವನ್ನು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ್ದ. ಆರಂಭದಲ್ಲಿ ನಿರಾಕರಿಸಿದ ಮಹಿಳೆ ಬಳಿಕ 18 ಗ್ರಾಂ ತೂಗುವ ಚಿನ್ನದ ಸರವನ್ನು ತೆಗೆದು ಅಪರಿಚಿತನಿಗೆ ನೀಡಿದ್ದಾರೆ.

ಅಪರಿಚಿತನು ಸರವನ್ನು ಯಾವುದೋ ನೀರಲ್ಲಿ ಸ್ವಲ್ಪ ಹೊತ್ತು ಅದ್ದಿ ತೆಗೆದು ಮಹಿಳೆಗೆ ಹಿಂತಿರುಗಿಸಿ ಸ್ಥಳದಿಂದ‌ ಕಾಲ್ಕಿತ್ತಿದ್ದಾನೆ. ಸರದ ಗಾತ್ರ ಇದ್ದಕ್ಕಿಂದ್ದಂತೆ ಕಡಿಮೆ ಆದುದನ್ನು ಕಂಡು ವಿಚಲಿತರಾದ ಮಹಿಳೆ ಸರವನ್ನು ಜ್ಯುವೆಲ್ಲರಿ ಒಂದರ ಮಾಪನದಲ್ಲಿ ಪರಿಶೀಲಿಸಿದಾಗ ಅದರಲ್ಲಿ 14 ಗ್ರಾಂನಷ್ಟು ಚಿನ್ನವು ಕರಗಿಹೋಗಿದ್ದು, ತಾನು ಮೋಸ ಹೋಗಿರುವ ಬಗ್ಗೆ ಅರಿವಾಗಿದೆ.

ಅಂಬ್ಲಮೊಗರು ಪ್ರದೇಶದ ಜನರು ಮಹಿಳೆಯ ಚಿನ್ನವನ್ನು ತೊಳೆದು ಯಾಮಾರಿಸಿದ ವ್ಯಕ್ತಿಯನ್ನ ಹುಡುಕಾಟ ನಡೆಸಿದ್ದು ಈ ವೇಳೆಗೆ ಆತ ಪರಾರಿ ಆಗಿದ್ದ. ಈ ಬಗ್ಗೆ ಸುಂದರಿ ಬುಧವಾರ ಸಂಜೆ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

error: Content is protected !!
Scroll to Top