ಕ್ಯೂಬಾ ಮೂಲದ ಪಾತಕಿ ಎಸಗಿದ ಕೃತ್ಯಕ್ಕೆ ಟ್ರಂಪ್ ಖಂಡನೆ
ವಾಷಿಂಗ್ಟನ್ : ಕರ್ನಾಟಕ ಮೂಲದ 50 ವರ್ಷದ ವ್ಯಕ್ತಿಯೊಬ್ಬರನ್ನು ಅಮೆರಿಕದಲ್ಲಿ ಹೆಂಡತಿ ಮತ್ತು ಮಗನ ಎದುರೇ ತಲೆ ಕತ್ತರಿಸಿ ಕೊಲೆ ಮಾಡಿದ ಬರ್ಬರ ಘಟನೆ ಸಂಭವಿಸಿದ್ದು, ಈ ಘಟನೆ ಜಾಗತಿಕವಾಗಿ ಕಳವಳಕ್ಕೆ ಕಾರಣವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಥ ಕೃತ್ಯ ಎಸಗಿದವನಿಗೆ ಯಾವುದೇ ಕಾರಣಕ್ಕೂ ಮೃದು ಧೋರಣೆ ತೋರಿಸುವುದಿಲ್ಲ ಎಂದು ಹೇಳಿದ್ದಾರೆ.
ಡಲ್ಲಾಸ್‌ನಲ್ಲಿ ಮೋಟೆಲ್ ಮ್ಯಾನೇಜರ್ ಆಗಿದ್ದ ಕರ್ನಾಟಕ ಮೂಲದ ಚಂದ್ರಮೌಳಿ ಬಾಬ್ ನಾಗಮಲ್ಲಯ್ಯ ಅವರನ್ನ ಕ್ಯೂಬಾ ದೇಶದ ಪ್ರಜೆ ಕೊಬೋಸ್ ಮಾರ್ಟಿನೆಜ್ ಎಂಬಾತ ಭೀಕರವಾಗಿ ಹತ್ಯೆಗೈದಿದ್ದಾನೆ. ವಾಷಿಂಗ್ ಮಷಿನ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಲೆ ತುಂಡು ಮಾಡಿ ಬಳಿಕ ಅದನ್ನು ಕಸದ ಬುಟ್ಟಿಗೆ ಎಸೆದಿದ್ದ. ಈ ಘಟನೆ ಸ್ಥಳೀಯರನ್ನೂ ಬೆಚ್ಚಿ ಬೀಳುವಂತೆ ಮಾಡಿತ್ತು.
ಕಳೆದ ಸೆ.10ರಂದು ಡಲ್ಲಾಸ್‌ನ ಡೌನ್‌ಟೌನ್ ಮೋಟೆಲ್ಸ್‌ನಲ್ಲಿ ಈ ಘಟನೆ ನಡೆದಿದೆ. ಚಂದ್ರಮೌಳಿ ಬಾಬ್ ನಾಗಮಲ್ಲಯ್ಯ ಮತ್ತು ಆರೋಪಿ ಕ್ಯೂಬಾ ದೇಶದ ಪ್ರಜೆ ಕೊಬೋಸ್ ಮಾರ್ಟಿನೆಜ್ ಇಬ್ಬರೂ ಈ ಮೋಟೆಲ್ಸ್‌ನಲ್ಲಿ ಉದ್ಯೋಗಿಗಳಾಗಿದ್ದರು. ಆರೋಪಿ ಕೊಬೋಸ್ ಮಾರ್ಟಿನೆಜ್ ಮತ್ತು ಇನ್ನೋರ್ವ ಮಹಿಳೆ ನೆಲ ಒರೆಸುತ್ತಿದ್ದಾಗ ಚಂದ್ರಮೌಳಿ ಮುರಿದ ವಾಷಿಂಗ್ ಮಷಿನ್‌ನಲ್ಲಿ ನೆಲ ಸ್ವಚ್ಛಗೊಳಿಸುವುದು ಬೇಡ ಎಂದು ಹೇಳಿದ್ದರು. ಈ ವಿಚಾರವಾಗಿ ಅವರ ನಡುವೆ ಜಗಳ ಪ್ರಾರಂಭವಾಗಿತ್ತು. ಆರೋಪಿ ತನ್ನ ಕೋಣೆಗೆ ಹೋಗಿ ಮಚ್ಚು ತಂದು ಚಂದ್ರಮೌಳಿ ಮೇಲೆ ಹಲ್ಲೆ ಮಾಡಲು ತೊಡಗಿದನು. ಚಂದ್ರಮೌಳಿ ಅವನಿಂದ ತಪ್ಪಿಸಿಕೊಂಡು ಪಾರ್ಕಿಂಗ್ ಏರಿಯಾ ಮೂಲಕ ಮೋಟೆಲ್‌ನ ಕಚೇರಿಯಿದ್ದ ಕಡೆ ಓಡಿದರು. ಅಲ್ಲಿ ಅವರ ಪತ್ನಿ ಮತ್ತು ಮಗ ಇದ್ದರು. ಆರೋಪಿ ಅಲ್ಲಿಗೂ ಬೆನ್ನಟ್ಟಿಕೊಂಡು ಬಂದು ಮಚ್ಚಿನಿಂದ ಕೊಚ್ಚಿ ಕೊಚ್ಚಿ ಕೊಲೆ ಮಾಡಿ ತಲೆಯನ್ನು ಕತ್ತರಿಸಿ ಹಾಕಿದ್ದಾನೆ. ನಂತರ ತಲೆಯನ್ನು ಫುಟ್‌ಬಾಲ್‌ನಂತೆ ಒದ್ದು, ಬಳಿಕ ಎತ್ತಿ ಅಲ್ಲಿಯೇ ಇದ್ದ ಕಸದ ಡಬ್ಬಕ್ಕೆ ಹಾಕಿದ್ದಾನೆ.
ಈ ಭೀಕರ ಕೃತ್ಯಕ್ಕೆ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆಘಾತ ವ್ಯಕ್ತಪಡಿಸಿರುವ ಟ್ರಂಪ್ ಕ್ಯೂಬಾದ ಅನ್ಯಕೋಮಿನ ವ್ಯಕ್ತಿಯೊಬ್ಬ ನಾಗಮಲ್ಲಯ್ಯ ಅವರ ಪತ್ನಿ ಮತ್ತು ಮಗನ ಮುಂದೆಯೇ ಕ್ರೂರವಾಗಿ ಶಿರಚ್ಛೇದ ಮಾಡಿದ್ದಾನೆ. ಅವನು ನಮ್ಮ ದೇಶದಲ್ಲಿ ಎಂದಿಗೂ ಇರಬಾರದು ಎಂದಿದ್ದಾರೆ. ಕ್ಯೂಬಾ ಪ್ರಜೆಯಾದ ಆ ದುಷ್ಟನನದನು ಕ್ಯೂಬಾ ದೇಶವೇ ತನ್ನಲ್ಲಿ ಇರಿಸಿಕೊಳ್ಳಲು ಬಯಲಿಲ್ಲ. ಹಾಗಾಗಿ ಈ ಹಿಂದೆ ಅಸಮರ್ಥ ಜೋ ಬೈಡನ್ ಅವರ ಅಡಿಯಲ್ಲಿ ನಮ್ಮ ದೇಶಕ್ಕೆ ಬಿಡುಗಡೆ ಮಾಡಿದರು. ಆದರೆ ಈ ಅಕ್ರಮ ವಲಸೆ ಅಪರಾಧಿಗಳ ಬಗ್ಗೆ ಮೃದುವಾಗಿ ವರ್ತಿಸುವ ಸಮಯ, ಮೃದು ಧೋರಣೆ ಈಗ ಮುಗಿದಿದೆ. ಬಂಧನದಲ್ಲಿರುವ ಈ ಅಪರಾಧಿಗೆ ಕಾನೂನಿನ ಅನ್ವಯ ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ ಒಳಪಡಿಸುತ್ತೇವೆ. ಫಸ್ಟ್ ಗ್ರೇಡ್ ಕೊಲೆ ಆರೋಪದ ಮೇಲೆ ಕಠಿಣ ಶಿಕ್ಷೆ ವಿಧಿಸುವಂತೆ ಮಾಡುವುದಾಗಿಯೂ ಟ್ರಂಪ್ ಭರವಸೆ ನೀಡಿದ್ದಾರೆ. ಆರೋಪಿಯ ಮೇಲೆ ಫಸ್ಟ್ ಗ್ರೇಡ್‌ನ ಕೊಲೆ ಆರೋಪ ಹೊರಿಸಲಾಗುವುದು. ಜೊತೆಗೆ ಕಾನೂನಿನ ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.

























