ನನ್ನ ಮೇಲೂ ದಾಳಿಯಾಗುವ ಸಾಧ್ಯತೆಯಿದೆ ಎಂದು ಎಸ್‌ಐಟಿ ಮುಂದೆ ಹೇಳಿಕೊಂಡ ದೂರುದಾರ
ಮಂಗಳೂರು: ಧರ್ಮಸ್ಥಳ ಪ್ರಕರಣದ ಕೇಂದ್ರವಾಗಿರುವ ಮುಸುಕುಧಾರಿ ಅನಾಮಿಕ ವ್ಯಕ್ತಿ ಎಸ್‌ಐಟಿ ಬಳಿ ತನಗೆ ಗನ್‌ಮ್ಯಾನ್ ರಕ್ಷಣೆ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಬುಧವಾರ ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಮಾಡಿದ ಬಳಿಕ ತುಸು ಉದ್ವಿಗ್ನ ವಾತಾವರಣವಿದೆ.
ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದ ಘರ್ಷಣೆಯ ಬಳಿಕ ದೂರುದಾರನಿಂದ ಈ ವಿಶೇಷ ಮನವಿ ಬಂದಿದೆ. ನನ್ನ ಮೇಲೂ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಗನ್‌ಮ್ಯಾನ್ ನೀಡಬೇಕೆಂದು ಮನವಿ ಮಾಡಿದ್ದಾರೆ.
ಗುರುವಾರದ ವಿಚಾರಣೆಯ ಸಂದರ್ಭದಲ್ಲಿ ದೂರುದಾರನ ಪರ ವಕೀಲರು ವಿಶೇಷ ತನಿಖಾ ತಂಡಕ್ಕೆ ಗನ್‌ಮ್ಯಾನ್ ನೀಡಬೇಕೆಂದು ಲಿಖಿತ ಮನವಿ ಮಾಡಿದ್ದಾರೆ. ಶೋಧ ಮುಕ್ತಾಯದ ನಂತರವೂ ನನಗೆ ಗನ್‌ಮ್ಯಾನ್ ಭದ್ರತೆ ನೀಡಬೇಕೆಂದು ಎಸ್‌ಐಟಿ ಎಸ್.ಪಿ ಜಿತೇಂದ್ರ ದಯಾಮ್ ಮುಂದೆ ಮನವಿ ಮಾಡಿದ್ದಾರೆ.
ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಶುಕ್ರವಾರ ದೂರುದಾರ ಆಗಮಿಸಿದ್ದಾರೆ. ದೂರುದಾರ ಆಗಮಿಸಿದ ಖಾಸಗಿ ಕಾರಿಗೂ ಪೊಲೀಸ್ ಕಾವಲು ಇದೆ. ಪೊಲೀಸ್ ವಾಹನದಲ್ಲಿದ್ದ ಚಾಲಕ ಸಹಿತ ಇಬ್ಬರು ಸಿಬ್ಬಂದಿಯನ್ನು ಕಾವಲು ಕಾಯಲು ನಿಯೋಜನೆ ಮಾಡಲಾಗಿದೆ.
























