ಎಡ್ಜ್‌ಬಾಸ್ಟನ್‌ನಲ್ಲಿ 6 ದಶಕಗಳ ಕಾಯುವಿಕೆಯ ಬಳಿಕ ಟೀ ಇಂಡಿಯಾಕ್ಕೆ ದಕ್ಕಿದ ಮೊದಲ ಗೆಲುವು

ಹಲವು ಕಾರಣಗಳಿಗೆ ವಿಶೇಷವಾಗಿದೆ ಶುಭಮನ್‌ ಗಿಲ್‌ ಪಡೆಯ ಟೆಸ್ಟ್‌ ಜಯ

ಲಂಡನ್‌ : ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ದಕ್ಕಿದ ಅದ್ಭುತ ಗೆಲುವು ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ. ಮುಖ್ಯವಾಗಿ ಸ್ಟಾರ್‌ ಆಟಗಾರರಿಲ್ಲದ, ಯುವ ಕ್ರಿಕೆಟಿಗರಿಂದಲೇ ತುಂಬಿದ ಟೀಂ ಇಂಡಿಯಾ ಹೊಸ ನಾಯಕನ ನೇತೃತ್ವದಲ್ಲಿ ಈ ಅದ್ಭುತ ಸಾಧನೆ ಮಾಡಿದೆ. ಇದಕ್ಕೂ ಮಿಗಿಲಾಗಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಸುಮಾರು ಆರು ದಶಕಗಳ ಕಾಯುವಿಕೆಯ ಬಳಿಕ ಭಾರತಕ್ಕೆ ಮೊದಲ ಗೆಲುವು ದಕ್ಕಿದೆ.

ಶುಭ್‌ಮನ್ ಗಿಲ್ ನಾಯಕತ್ವದ ಯಂಗ್ ಇಂಡಿಯಾ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 336 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಇದರೊಂದಿಗೆ 58 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಗೆಲುವು ದಾಖಲಿಸಿತು. ಅಲ್ಲದೆ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾದ ಗೆಲುವಿನ ಖಾತೆ ಕೂಡ ತೆರೆಯಿತು.





















































 
 

1967ರಲ್ಲಿ ಬರ್ಮಿಂಗ್‌ಹಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಆದರೆ ಅಂದಿನಿಂದ 2025 ರವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಈ ಮೈದಾನದಲ್ಲಿ ಈ ಹಿಂದೆ ಆಡಿದ್ದ 8 ಪಂದ್ಯಗಳಲ್ಲಿ 7ರಲ್ಲಿ ಟೀಂ ಇಂಡಿಯಾ ಸೋತಿದ್ದರೆ, 1986ರಲ್ಲಿ ನಡೆದಿದ್ದ ಒಂದು ಟೆಸ್ಟ್ ಪಂದ್ಯ ಡ್ರಾ ಆಗಿತ್ತು. ಸ್ಟಾರ್ ಆಟಗಾರರು, ಲೆಜೆಂಡರಿ ಆಟಗಾರರು ಮತ್ತು ಬಲಿಷ್ಠ ನಾಯಕರ ಹೊರತಾಗಿಯೂ, ಟೀಂ ಇಂಡಿಯಾಗೆ ಎಡ್ಜ್‌ಬಾಸ್ಟನ್ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಹೊಸ ನಾಯಕ ಶುಭ್‌ಮನ್ ಗಿಲ್ ಮತ್ತು ಸ್ಟಾರ್ ಆಟಗಾರರಿಲ್ಲದೆ ಈ ಪಂದ್ಯಕ್ಕಿಳಿದಿದ್ದ ಟೀಂ ಇಂಡಿಯಾ ಅಂತಿಮವಾಗಿ ಈ ಸಾಧನೆ ಮಾಡಿತು. ಈ ಗೆಲುವು 2021ರಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಗೆಲುವಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.

ಲೀಡ್ಸ್‌ ಟೆಸ್ಟ್​ನಲ್ಲಿ ಐದು ಶತಕ ಬಾರಿಸಿಯೂ ಐದು ವಿಕೆಟ್​ಗಳಿಂದ ಸೋತಿದ್ದ ಟೀಂ ಇಂಡಿಯಾ, ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯವನ್ನು 336 ರನ್​ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಟೀಂ ಇಂಡಿಯಾ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ ಪಟ್ಟಿಯಲ್ಲಿ ದೊಡ್ಡ ಜಿಗಿತ ಸಾಧಿಸಿ ನಾಲ್ಕನೇ ಸ್ಥಾನಕ್ಕೆ ಬಂದಿದ್ದರೆ, ಇತ್ತ ಭಾರಿ ಅಂತರದಲ್ಲಿ ಸೋತ ಆತಿಥೇಯ ಇಂಗ್ಲೆಂಡ್ ಎರಡನೇ ಸ್ಥಾನದಿಂದ ಕುಸಿದು ಮೂರನೇ ಸ್ಥಾನಕ್ಕೆ ಬಂದಿದೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ 407 ರನ್‌ಗಳಿಗೆ ಆಲೌಟ್ ಆಯಿತು. ಭಾರತ ಎರಡನೇ ಇನ್ನಿಂಗ್ಸ್ ಅನ್ನು 427 ರನ್‌ಗಳಿಗೆ ಡಿಕ್ಲೇರ್ ಮಾಡಿತು. ಅಂತಿಮವಾಗಿ ಭಾರತ ನೀಡಿದ 608 ರನ್‌ಗಳ ಬೃಹತ್‌ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 271 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ಆಕಾಶ್ ದೀಪ್ 6 ವಿಕೆಟ್‌ಗಳನ್ನು ಕಬಳಿಸಿದರು. ಇಂಗ್ಲೆಂಡ್ ತಂಡವನ್ನು 336 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಐದು ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ.

error: Content is protected !!
Scroll to Top